ಕೊಣಾಜೆ ಠಾಣೆ ಎದುರು ಪ್ರತಿಭಟನೆ: ಇನ್ಸ್‌ಪೆಕ್ಟರ್ ಅಶೋಕ್ ವಜಾಕ್ಕೆ ಆಗ್ರಹ

Thu, 05/04/2017 - 10:07 -- web editor

ಮಂಗಳೂರು: ಕಾರ್ತಿಕ್ ರಾಜ್‌ನ ಹತ್ಯೆಯಾದ ಬಳಿಕ ಕಳೆದ ಎಂಟು ತಿಂಗಳಲ್ಲಿ ಪೊಲೀಸರು ರಾತ್ರಿಯ ವೇಳೆ ಮುಸ್ಲಿಮರ ಮನೆಗಳಿಗೆ ನುಗ್ಗಿ ವದ್ಧರು, ಮಹಿಳೆಯರೆನ್ನದೆ ಅಮಾಯಕರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಬಲವಂತವಾಗಿ ಆಪಾದನೆಯನ್ನು ಒಪ್ಪಿಸುವಂತಹ ಪ್ರಯತ್ನಗಳು ಸತತವಾಗಿ ನಡೆದಿದ್ದವು. ಇನ್ಸ್‌ಪೆಕ್ಟರ್ ಅಶೋಕ್‌ರಿಗೆ ಕಾರ್ತಿಕ್ ರಾಜ್ ಕುಟುಂಬದ ಕಲಹದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರೂ ಅಮಾಯಕರಿಗೆ ಹಿಂಸೆ ನೀಡಿದ್ದಾರೆ. ತಮ್ಮ ವೃತ್ತಿ ಧರ್ಮಕ್ಕೆ ದ್ರೋಹ ಬಗೆದ ಇಂತಹ ಇನ್ಸ್‌ಪೆಕ್ಟರ್‌ರನ್ನು ಕೂಡಲೇ ಸರಕಾರ ವಜಾಗೊಳಿಸಬೇಕು. ಅವರನ್ನು ವಜಾಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಕಮಿಷನರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಎಚ್ಚರಿಕೆ ನೀಡಿದ್ದಾರೆ.

ಸ್ವಜನಪಕ್ಷ ತೋರಿದ ಕೊಣಾಜೆ ಇನ್ಸ್‌ಪೆಕ್ಟರ್ ಅಶೋಕ್ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕೊಣಾಜೆ ಪೊಲೀಸ್ ಠಾಣೆ ಎದುರು ನಾಗರಿಕ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾರ್ತಿಕ್ ಹತ್ಯೆಯನ್ನು ರಾಜಕೀಯಗೊಳಿಸಲು ನೋಡಿದ ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಗಳು ಪತ್ತೆಯಾದ ನಂತರ ಅವರ ನಾಲಗೆ ಅಲುಗಾಡುತ್ತಿಲ್ಲ. ಅದಕ್ಕಿಂತ ಮುಂಚೆ ಅವರು ಕೊಣಾಜೆ ಠಾಣೆಯೆದುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ನೀಡಿದ್ದರು. ಇಂತಹವರನ್ನು ನಾವು ಸಂಸದರಾಗಿ ಆಯ್ಕೆ ಮಾಡಿ ಕಳುಹಿಸಿರುವುದು ದುರದಷ್ಟಕರ ಎಂದು ಅವರು ಹೇಳಿದರು.ಕಾರ್ತಿಕ್ ರಾಜ್ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಪಾತ್ರ ಇರುವುದು ಋಜುವಾತು ಆದಲ್ಲಿ ಅವರ ಮೇಲೂ ಕೊಲೆ ಮೊಕದ್ದಮೆಯನ್ನು ದಾಖಲಿಸಿ ಬಂಧಿಸಬೇಕು. ಪ್ರಕರಣಕ್ಕೆ ಸಂಬಂಧಿಸಿ ಶಿಹಾದ್ ಎಂಬ ಯುವಕನನ್ನು ತನಿಖೆಯ ನೆಪದಲ್ಲಿ ವಶಕ್ಕೆ ಪಡೆದು 7 ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿರಿಸಿ, ಬಲವಂತವಾಗಿ ಒಪ್ಪಿಸುವ ಕೆಲಸ ನಡೆದಿತ್ತು. ಆದರೂ ಆತ ಒಪ್ಪದೇ ಇದ್ದಾಗ ಬೇರೆ ಕೇಸ್ ಹಾಕಿ ಬಂಧನದಲ್ಲಿಡಲಾಗಿತ್ತು. ಹೀಗೆ ಹಲವರ ಮೇಲೆ ದೌರ್ಜನ್ಯ ಎಸಗಲಾಗಿದೆ. ಇಂತಹ ಕೃತ್ಯಗಳಿಂದ ಪೊಲೀಸರ ಮೇಲೆ ಜನರು ನಂಬಿಕೆ ಕಳೆದುಕೊಂಡು ನಾಗರಿಕರ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಶಾಫಿ ಬೆಳ್ಳಾರೆ ಆರೋಪಿಸಿದರು.

ಮಾಜಿ ತಾಲೂಕು ಪಂಚಾಯತ್ ಸದಸ್ಯ ಮುಸ್ತಫಾ ಹರೇಕಳ ಮಾತನಾಡಿ, ತನಿಖೆಯ ದಿಕ್ಕು ತಪ್ಪಿಸಲು ಸಂಘಪರಿವಾರದವರು ಘಟನೆಯನ್ನು ರಾಜಕೀಯ ಮಾಡಲು ಹೊರಟಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇದೊಂದು ಮತೀಯ ಕೃತ್ಯ ಎಂದು ಬಿಂಬಿಸಿದ್ದರು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಅಮಾಯಕ ಯುವಕರನ್ನು ತನಿಖೆಯ ನೆಪದಲ್ಲಿ ಹಿಂಸಿಸಿದ್ದಾರೆ. ಪೊಲೀಸರು ಜನರ ನಂಬಿಕೆಯನ್ನು ಉಳಿಸುವಂತಹ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಪಾಪ್ಯುಲರ್ ಫ್ರಂಟ್ ಮಂಗಳೂರು ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ, ಎಸ್‌ಡಿಪಿಐ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ಸಲಫಿ ಮೂವ್‌ಮೆಂಟ್‌ನ ಇಸ್ಮಾಯೀಲ್ ಶಾಫಿ, ಕೋಮು ಸೌಹಾರ್ದ ವೇದಿಕೆಯ ಇಸ್ಮತ್ ಫಜೀರು, ಎಸ್‌ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯಾ, ಪಾಪ್ಯುಲರ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಎ.ಕೆ. ಉಪಸ್ಥಿತರಿದ್ದರು.

ಇದೇ ವೇಳೆ ನಾಗರಿಕ ಸಮಿತಿಯ ವತಿಯಿಂದ ಕ್ರೈಂ ಡಿಸಿಪಿ ಸಂಜೀವ್ ಪಾಟೀಲ್ ಅವರಿಗೆ ಇನ್ಸ್‌ಪೆಕ್ಟರ್ ಅಶೋಕ್‌ರನ್ನು ವಜಾಗೊಳಿಸುವಂತೆ ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಯಿತು.