ಜಮಲಾಬಾದ್: ಸೂಚನಾ ಫಲಕ ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ

Thu, 05/04/2017 - 13:47 -- web editor

ಬೆಳ್ತಂಗಡಿ: ಐತಿಹಾಸಿಕ ಜಮಲಾಬಾದ್ ಕೋಟೆಗೆ ಹೋಗುವ ದಾರಿ ಸೂಚನಾ ಫಲಕವನ್ನು ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಜಮಲಾಬಾದ್ ನಾಗರಿಕ ಸಮಿತಿಯ ವತಿಯಿಂದ ಬೆಳ್ತಂಗಡಿ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು.

ದಾರಿ ಸೂಚನಾ ಫಲಕವನ್ನು ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಂಜೊಟ್ಟಿ ಬಸ್ಸು ನಿಲ್ದಾಣದ ಸಮೀಪ ಅಳವಡಿಸಲಾಗಿತ್ತು. ಎಪ್ರಿಲ್ 29ರಂದು ರಾತ್ರಿ ಕಿಡಿಗೇಡಿಗಳು ಸೂಚನಾ ಫಲಕವನ್ನು ವಿರೂಪಗೊಳಿಸಿ ಐತಿಹಾಸಿಕ ಜಮಲಾಬಾದ್ ಹೆಸರಿಗೆ ಕಪ್ಪು ಮಸಿ ಬಳಿದು ನರಸಿಂಹ ಗಡ ಎಂಬುದಾಗಿ ಬದಲಾಯಿಸಿದ್ದಾರೆ. ಇದು ಜಮಲಾಬಾದ್‌ನ ಇತಿಹಾಸವನ್ನು ತಿರುಚಲು ಕಿಡಿಗೇಡಿಗಳು ನಡೆಸಿದ ಷಡ್ಯಂತ್ರವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಲ್ಲದೇ, ಈ ಸ್ಥಳದಲ್ಲಿ ದಾರಿ ಮಧ್ಯೆ ಅನಧಿಕೃತ ಕಟ್ಟೆಯೊಂದನ್ನು ಕಟ್ಟಿ ಆ ಕಟ್ಟೆಗೆ ನರಸಿಂಹ ಗಡ ಎಂದು ಬರೆದು ಪರಿಸರದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಅಳಿಸಿ ಹಾಕಿರುವ ಜಮಲಾಬಾದ್ ಕೋಟೆ ಹೆಸರನ್ನು ಅದೇ ಸ್ಥಳದಲ್ಲಿ ಬರೆಸಲು ಮತ್ತು ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ಅಧ್ಯಕ್ಷ ನವಾಝ್ ಕಟ್ಟೆ, ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ಎಸ್‌ಡಿಪಿಐ ಮಡಂತ್ಯಾರ್ ವಲಯಾಧ್ಯಕ್ಷ ರಿಯಾಝ್ ಪುಂಜಾಲಕಟ್ಟೆ ಮತ್ತಿತರ ಸಾಮಾಜಿಕ ಕಾರ್ಯಕರ್ತರು ಹಾಜರಿದ್ದರು.