ಕಲ್ಲಡ್ಕ: ಮಹಿಳೆಯರ ಮೇಲೆ ಪೊಲೀಸ್ ದೌರ್ಜನ್ಯ; ಎನ್.ಡಬ್ಲೂ.ಎಫ್. ಖಂಡನೆ

Thu, 06/15/2017 - 12:26 -- web editor

ಬಂಟ್ವಾಳ: ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದ ಯುವಕನೋರ್ವನಿಗೆ ಚೂರಿ ಇರಿತ, ಮಸೀದಿಗೆ ಕಲ್ಲೆಸೆತ ಇನ್ನಿತರ ಅಹಿತಕರ ಘಟನೆಗಳ ನಂತರ ಬಂಟ್ವಾಳ ಪೊಲೀಸರು ಕಲ್ಲಡ್ಕದ ಮಾಣಿಮಜಲು, ಕೆ.ಸಿ.ರೋಡ್ ಮೊದಲಾದ ಕಡೆಗಳಲ್ಲಿ ರಾತ್ರಿ ಹೊತ್ತಿನಲ್ಲಿ ಅಕ್ರಮವಾಗಿ ಹಲವು ಮನೆಗಳಿಗೆ ನುಗ್ಗಿ ಅಮಾಯಕ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿರುವುದನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ದ.ಕ.ಜಿಲ್ಲಾ ಸಮಿತಿಯು ಖಂಡಿಸಿದೆ.

ಮಹಿಳಾ ಪೊಲೀಸರಿಲ್ಲದೆ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವ ಪೊಲೀಸರ ಅಮಾನುಷ ಕತ್ಯವು ನಾಗರಿಕ ಸಮಾಜ ಒಪ್ಪುವಂತಹದಲ್ಲ. ಈ ಕೃತ್ಯ ನಡೆಸಿದ ತಪ್ಪಿತಸ್ಥ ಪೊಲೀಸರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರವನ್ನು ಎನ್.ಡಬ್ಲೂ.ಎಫ್ ಒತ್ತಾಯಿಸುತ್ತದೆ.

ಪೊಲೀಸರ ಹಲ್ಲೆಗಳಿಂದ ಗಾಯಾಳುಗಳಾಗಿ ನಾಲ್ವರು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಪರಿಹಾರವನ್ನು ಕಲ್ಪಿಸಬೇಕು ಮತ್ತು ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಎನ್‌ಡಬ್ಲುಎಫ್ ಆಗ್ರಹಿಸಿದೆ.

ಈ ಪ್ರಕರಣವನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆಯು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎನ್.ಡಬ್ಲೂ.ಎಫ್. ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮ್ಲತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.