ಸೋನಿಯಾ ಗಾಂಧಿ ಕಾಲೋನಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ

Fri, 08/18/2017 - 09:22 -- web editor

ಗುಲ್ಬರ್ಗಾ: ರಿಹಾಬ್ ಇಂಡಿಯಾ ಫೌಂಡೇಶನ್ ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸುತ್ತಿರುವ ಸೋನಿಯಾ ಗಾಂಧಿ ಕಾಲೋನಿಯಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಸಾಬಿರ್ ಧ್ವಜಾರೋಹಣ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ರಫ್ ಮಾಚಾರ್ ವಹಿಸಿದ್ದರು. ಲಾಲ್ ಅಹ್ಮದ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಗುಲ್ಬರ್ಗಾ ಜಿಲ್ಲಾಧ್ಯಕ್ಷ ಮುಹಮ್ಮದ್ ಮುಹ್ಸಿನ್, ಸಾಮಾಜಿಕ ಬದಲಾವಣೆ ಹಾಗೂ ನಮ್ಮ ಜವಾಬ್ದಾರಿ ವಿಷಯದ ಕುರಿತು ಮಾತನಾಡಿದರು. ಗುಲ್ಬರ್ಗಾದ ಮಿಲ್ಲತ್ ಬೈತುಲ್ ಮಾಲ್‌ನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಎಲ್ಲಾ ಸಹಕಾರಗಳೊಂದಿಗೆ ರಿಹಾಬ್ ಇಂಡಿಯಾ ಫೌಂಡೇಶನ್ ಜೊತೆಗೆ ಕೈಜೋಡಿಸುವ ಭರವಸೆ ನೀಡಿದರು. ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಜ್ಯಾಧ್ಯಕ್ಷ ಯೂಸುಫ್ ರಶಾದಿ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪಟೇಲ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಆಕರ್ಷಕ ಕಲಾ ಪ್ರದರ್ಶನ ನಡೆಯಿತು. ಹೊಲಿಗೆ ತರಬೇತಿಯ ವಿದ್ಯಾರ್ಥಿಗಳಿಂದ ಸ್ವವಿನ್ಯಾಸಗೊಳಿಸಿದ ವಸ್ತ್ರಗಳ ಪ್ರದರ್ಶನ ನಡೆಯಿತು. ಕಾಲೋನಿಯಲ್ಲಿ ಉನ್ನತ ವ್ಯಾಸಂಗ ಮಾಡುವ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು. ಸಯ್ಯದ್ ದಸ್ತಗಿರ್‌ಕಾರ್ಯಕ್ರಮ ನಿರೂಪಿಸಿದರು.

ಮೂಲಭೂತ ಸೌಕರ್ಯ ವಂಚಿತ ಕಾಲೋನಿಗೆ ಆಶಾಕಿರಣವಾದ ರಿಹಾಬ್ ಇಂಡಿಯಾ ಫೌಂಡೇಶನ್

ಸೋನಿಯಾ ಗಾಂಧಿ ಕಾಲೋನಿ ಎಂಬುದು ಗುಲ್ಬರ್ಗ ನಗರ ಪ್ರದೇಶದಿಂದ ಬರೇ 4 ಕಿ.ಮೀ. ದೂರದಲ್ಲಿ ಇರುವ ಒಂದು ಬಡಾವಣೆ. ಈ ಕಾಲೋನಿಯು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು, ಪ್ರಾಥಮಿಕ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾಗಿತ್ತು. ಒಟ್ಟು 468 ಮನೆಗಳು ಈ ಕಾಲೋನಿಯಲ್ಲಿವೆ.ಸುಮಾರು ಒಂದೂವರೆ ವರ್ಷಗಳ ಹಿಂದೆ ಈ ಕಾಲೊನಿಗೆ ಭೇಟಿಕೊಟ್ಟ ರಿಹಾಬ್ ಇಂಡಿಯಾ ಫೌಂಡೇಶನ್ ಎಂಬ ಸರಕಾರೇತರ ಸಂಸ್ಥೆಯು ಈ ಕಾಲೋನಿಯನ್ನು ದತ್ತು ಪಡೆಯಲು ತೀರ್ಮಾನಿಸಿ ಕಾರ್ಯಪ್ರವೃತ್ತವಾಯಿತು.

ನೀರಿಗಾಗಿ ಎಲ್ಲೆಲ್ಲೋ ಅಲೆದಾಡುತ್ತಿದ್ದ ಜನರಿಗಾಗಿ 4 ಕೊಳವೆ ಬಾವಿಗಳನ್ನು ತೋಡಿಸಿ, ಟ್ಯಾಂಕ್‌ಗಳನ್ನು ನಿರ್ಮಿಸಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಯಿತು. ಸುಮಾರು 100 ಶೌಚಾಲಯಗಳು ಮತ್ತು ಚರಂಡಿ ವ್ಯವಸ್ಥೆಯನ್ನು ಕಾರ್ಪೊರೇಷನ್‌ನ ಸಹಯೋಗದೊಂದಿಗೆ ನಿರ್ಮಿಸಿಕೊಡಲಾಯಿತು. ಕಾಲೋನಿ ಮಧ್ಯ ಭಾಗದಲ್ಲಿ ಸಮುದಾಯ ಕೇಂದ್ರವೊಂದನ್ನು ನಿರ್ಮಿಸಿ ಮಕ್ಕಳಿಗೆ ಟ್ಯೂಷನ್ ನೀಡುವ ಮೂಲಕ ಅರ್ಧದಲ್ಲಿ ಶಾಲೆ ತೊರೆದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವುದು ಮತ್ತು ಶಿಕ್ಷಣದಲ್ಲಿ ಮುಂದುವರಿಯಲು ಬೇಕಾದ ಅಗತ್ಯ ತರಬೇತಿಯನ್ನು ನೀಡುವ ಕೆಲಸ ಮಾಡುತ್ತಿದೆ. ಹೊಲಿಗೆ ತರಬೇತಿ, ಸ್ವಸಹಾಯ ಸಂಘಗಳನ್ನು ರಚಿಸಿಕೊಂಢು ಆರ್ಥಿಕ ಸಬಲೀಕರಣದ ಬಗ್ಗೆ ಗಮನ ಹರಿಸುತ್ತಿದೆ. ನಿರಂತರ ಆರೋಗ್ಯ ತಪಾಸಣಾ ಶಿಬಿರಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ.