‘ಮನೆಯಿಂದ ಹೊರಗೆ ಬನ್ನಿ’: ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮ

Tue, 08/29/2017 - 11:39 -- web editor

ಮಂಗಳೂರು: ದೇಶಾದ್ಯಂತ ಮುಸ್ಲಿಮರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ಆಗಸ್ಟ್ 25ರ ಶುಕ್ರವಾರದಂದು ‘ಮನೆಯಿಂದ ಹೊರಗೆ ಬನ್ನಿ’ ಎಂಬ ಘೋಷಣೆಯೊಂದಿಗೆ ರಾಷ್ಟ್ರಾದ್ಯಂತ ಏಕಕಾಲಕ್ಕೆ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷೆಗೂ ಮಿಕ್ಕಿ ಜನಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಯಿತು.

ಜಿಲ್ಲಾದ್ಯಂತ ಪ್ರಮುಖ ಮಸೀದಿಗಳ ಮುಂಭಾಗದಲ್ಲಿ, ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಪಟ್ಟಣ, ನಗರ ಪ್ರದೇಶಗಳಲ್ಲಿ ಸಾರ್ವಜನಿಕರೆಲ್ಲರೂ ಒಂದಾಗಿ ಮಾನವ ಸರಪಳಿ ರಚಿಸುವ ಮೂಲಕ ಗುಂಪು ಹಿಂಸಾ ಹತ್ಯೆಯ ವಿರುದ್ಧ ಐಕ್ಯಮತವನ್ನು ಪ್ರದರ್ಶಿಸಲಾಯಿತು.

20 ನಿಮಿಷಗಳ ಕಾಲ ನಡೆದ ಮಾನವ ಸರಪಳಿಯ ಮೂಲಕ ಮಾನವೀಯತೆಗಾಗಿ ಒಂದಾಗೋಣ, ಭಾರತ ಲಿಂಚಿಸ್ತಾನ ಆಗುವುದನ್ನು ತಡೆಯೋಣ, ಗುಂಪು ಹತೈಯನ್ನು ಕೊನೆಗೊಳಿಸೋಣ, ಅಮಾಯಕರ ಜೀವವನ್ನು ರಕ್ಷಿಸೋಣ, ನ್ಯಾಯಾಲಯಗಳ ಕಣ್ಣು ತೆರೆಸೋಣ, ಗೋ ರಾಜಕೀಯವನ್ನು ತಡೆಯೋಣ ಮತ್ತು ಕಾನೂನು ಪಾಲಕರ ಕರ್ತವ್ಯವನ್ನು ನೆನಪಿಸೋಣ ಎಂಬಿತ್ಯಾದಿ ಭಿತ್ತಿಪತ್ರಗಳನ್ನು ಹಿಡಿದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಗುಂಪು ಹಿಂಸೆಯಿಂದ ಹತ್ಯೆಯಾದ ಅಮಾಯಕರ ಚಿತ್ರಗಳ ಮುಖವಾಡವನ್ನು ಧರಿಸಿ ಅವರ ಹತೈಯನ್ನು ಮರೆಯುವುದಿಲ್ಲ ಎಂಬ ವಿಚಾರವನ್ನು ಪ್ರದರ್ಶಿಸುವುದರ ಮೂಲಕ ಹಿಂಸಾ ಕೃತ್ಯಕ್ಕೆ ಬಲಿಯಾದವರಿಗೆ ನ್ಯಾಯ ದೊರಕಿಸಲು ಜಾಗೃತಿಯನ್ನು ಮೂಡಿಸಿದರು.

ಜಿಲ್ಲಾದ್ಯಂತ 43 ಕಡೆಗಳಲ್ಲಿ ಸಾವಿರಾರು ಮಂದಿ ಸೇರಿದ ಬಹತ್ ಮಾನವ ಸರಪಳಿ ಕಾರ್ಯಕ್ರಮ ನಡೆದಿದ್ದು ಸಂಘಟನಾತೀತವಾಗಿ, ಪಕ್ಷಾತೀತವಾಗಿ ನಡೆದ ಈ ವಿಭಿನ್ನ ಕಾರ್ಯಕ್ರಮಕ್ಕೆ ಎಲ್ಲಾ ಕಡೆಗಳಲ್ಲಿ ವ್ಯಾಪಕ ಜನ ಬೆಂಬಲ ದೊರಕಿರುವುದು ಜನರಲ್ಲಿ ಸಂವಿಧಾನಬದ್ಧವಾದ ಪ್ರತಿರೋಧ ಶಕ್ತಿ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಯಿತು. ಅದೇ ರೀತಿ ಗುಂಪು ಹಿಂಸೆಯ ಮೂಲಕ ಭಾರತೀಯರನ್ನು ಹತೈಗೈಯುವ ಸಂಘಪರಿವಾರದ ಗೋ ರಾಕ್ಷಕರಿಗೆ ಎಚ್ಚರಿಕೆಯ ಪ್ರತಿರೋಧದ ಶಕ್ತಿ ತೋರಿಸುವುದರಲ್ಲಿಯೂ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಯಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಜ್ಞಾವಂತ ನಾಗರಿಕರು ಈ ಹೋರಾಟದಲ್ಲಿ ಕೈ ಜೋಡಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿರುವ ಅಭಿಯಾನದ ಜಿಲ್ಲಾ ಸಂಯೋಜಕರಾದ ನವಾಝ್ ಉಳ್ಳಾಲ ಹಾಗೂ ಜಿಲ್ಲಾದ್ಯಕ್ಷ ಹನೀಫ್ ಖಾನ್ ಕೊಡಾಜೆ, ಮುಂದೆಯೂ ದೇಶದ ಉಳಿವಿಗಾಗಿ ಹಾಗೂ ಅಮಾಯಕ ಭಾರತೀಯರ ರಕ್ಷಣೆಗಾಗಿ ತಮ್ಮೊಂದಿಗೆ ಕೈ ಜೋಡಿಸಬೇಕೆಂದು ಜನರೊಂದಿಗೆ ವಿನಂತಿಸಿದ್ದಾರೆ.