ಶಾಂತಿಯುತ ಬಕ್ರೀದ್ ಆಚರಣೆಗೆ ಭದ್ರತೆ ಒದಗಿಸಲು ಇಮಾಮ್ಸ್ ಕೌನ್ಸಿಲ್ ಮನವಿ

Tue, 08/29/2017 - 12:54 -- web editor

ಮಂಗಳೂರು: ಮುಸ್ಲಿಮರು ಜಗತ್ತಿನಾದ್ಯಂತ ಆಚರಿಸುವ ಪವಿತ್ರ ಹಬ್ಬವಾದ ಬಕ್ರೀದ್ ಆಚರಣೆಗೆ ಯಾವುದೇ ರೀತಿಯ ತೊಡಕು ಉಂಟಾಗದಂತೆ ಮತ್ತು ಕುರ್ಬಾನಿಯು ಸೂಕ್ತ ವೇಳೆಯಲ್ಲಿ ನಡೆಯುವಂತಾಗಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭದ್ರತೆ ಒದಗಿಸಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ.ಜಿಲ್ಲಾ ಸಮಿತಿಯ ನಿಯೋಗವು ದ.ಕ.ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿಯನ್ನು ಸಲ್ಲಿಸಿತು.

ಬಕ್ರೀದ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ಹಬ್ಬ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಮುಸ್ಲಿಮರು ಇದನ್ನು ಬಹಳ ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೆ. ಈ ಹಬ್ಬದಲ್ಲಿ ಮುಖ್ಯವಾಗಿ ಬಲಿದಾನ ಅಥವಾ ಕುರ್ಬಾನಿ ಮಾಡುವುದು ಮುಸ್ಲಿಮರಿಗೆ ಕಡ್ಡಾಯ ಕರ್ಮವಾಗಿದೆ. ಇದನ್ನು ಮುಸ್ಲಿಮರು ಪರಿಪೂರ್ಣವಾಗಿ ಆಚರಿಸಲು ನಮ್ಮ ದೇಶದ ಸಂವಿಧಾನ ಅನುಮತಿಸಿದೆ. ಆದರೆ ಇತ್ತೀಚೆಗೆ ದೇಶದೆಲ್ಲೆಡೆ ಆವರಿಸಿರುವ ಗೋರಕ್ಷಕರೆಂಬ ದುಷ್ಕರ್ಮಿಗಳು ಇಂತಹ ಧಾರ್ಮಿಕ ಉದ್ದೇಶಕ್ಕಾಗಿ ಕೊಂಡು ಬರುವ ಜಾನುವಾರುಗಳನ್ನು ತಡೆಯುತ್ತಿದ್ದಾರೆ. ಅಲ್ಲದೇ ಬಹಿರಂಗವಾಗಿ ದರೋಡೆ ನಡೆಸಿ ಹಲ್ಲೆ, ಕೊಲೆ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ. ದೇಶದ ಕಾನೂನನ್ನು ಕೈಗೆತ್ತಿಕೊಳ್ಳುವ ಈ ಮಂದಿ ಹಿಂಸಾ ಕತ್ಯಗಳನ್ನು ಎಸಗುವುದರ ಜತೆಗೆ ದೇಶಭಕ್ತರ ಸೋಗಿನಲ್ಲಿ ತಮ್ಮ ದುಷ್ಕೃತ್ಯಗಳನ್ನು ಬಹಿರಂಗವಾಗಿ ಸಮರ್ಥಿಸುತ್ತಿದ್ದಾರೆ. ಕೆಲವೆಡೆ ಇಂತಹ ಸಂವಿಧಾನ ವಿರೋಧಿ ದುಷ್ಕೃತ್ಯಗಳು ಈಗಲೂ ಮುಂದುವರಿದಿದ್ದು, ಮುಸ್ಲಿಮರು ತಮ್ಮ ಹಬ್ಬಗಳನ್ನು ಆಚರಿಸುವ ಬಗ್ಗೆ ಆತಂಕದಲ್ಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮುಸ್ಲಿಮರ ಹಬ್ಬ ಆಚರಣೆಗೆ ಯಾವುದೇ ರೀತಿಯ ತೊಡಕು ಉಂಟಾಗದಂತೆ ಮತ್ತು ಕುರ್ಬಾನಿಯು ಸುಸೂತ್ರವಾಗಿ ನಡೆಯುವಂತೆ ಸೂಕ್ತ ಮುಂಜಾಗ್ರತಾ ಕ್ರಮಗಳ್ಳಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಮನವಿಯಲ್ಲಿ ಒತ್ತಾಯಿಸಿದೆ.