ಅಮೀರೆ ಶರಿಯತ್ ಹಝ್ರತ್ ಮೌಲಾನಾ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖ್ವಿ ನಿಧನ

Mon, 09/11/2017 - 05:48 -- web editor

ಬೆಂಗಳೂರು: ಅಮೀರೆ ಶರಿಯತ್ ಹಝ್ರತ್ ಮೌಲಾನಾ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖ್ವಿ (80) ಸೆಂಪ್ಟಂಬರ್ 8ರಂದು ನಿಧನರಾದರು. ರಾಜ್ಯದ ಪ್ರಖ್ಯಾತ ಇಸ್ಲಾಮಿ ವಿದ್ವಾಂಸರು, ದೇಶ ವಿದೇಶಗಳಲ್ಲಿ ಚಿರಪರಿಚಿತರೂ ಆದ ಮೌಲಾನ ಅಶ್ರಫ್ ಅಲಿ, ಬೆಂಗಳೂರಿನ ಗೋವಿಂದಪುರದಲ್ಲಿರುವ ಪ್ರತಿಷ್ಠಿತ ಇಸ್ಲಾಮೀ ಶರೀಯತ್ ಕಾಲೇಜ್, ದಾರುಲ್ ಉಲೂಂ ಸಬೀಲುರ್ರಷಾದ್ ಇದರ ಪ್ರಾಂಶುಪಾಲರಾಗಿದ್ದರು.

ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಕಾರ್ಯಕಾರಿ ಸಮಿತಿ ಸದಸ್ಯ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಉಪಾಧ್ಯಕ್ಷ, ಇಸ್ಲಾಮಿ ಫಿಖಾ ಅಕಾಡಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ತಂದೆ ಹಝ್ರತ್ ಮೌಲಾನ ಅಬುಸವುದ್ ನಿಧನ ನಂತರ ದಾರೂಲ್ ಉಲೂಂ ಸಬೀಲುರ್ರಷಾದ್‌ನ ನೇತತ್ವ ವಹಿಸಿಕೊಂಡ ಅಶ್ರಫ್ ಅಲಿ ಅವರು ಅದನ್ನು ಯಶಸ್ವಿಯಾಗಿ ಮುನ್ನಡೆಸಿದರು. ಅದೇ ರೀತಿ ತಮ್ಮ ಜೀವನದ ಕೊನೆಯ ಕ್ಷಣದ ವರೆಗೂ ಅವರು ಅಮೀರೆ ಶರೀಯತ್‌ನ ಗೌರವಕ್ಕೆ ಪಾತ್ರರಾಗಿದ್ದರು. ಕೇವಲ ಧಾರ್ಮಿಕ ವಿಚಾರಗಳಿಗಷ್ಟೇ ಸೀಮಿತವಾಗಿರದೆ ಸಾಮಾಜಿಕ ಹೋರಾಟಗಳಲ್ಲಿಯೂ ಅವರು ಸಕ್ರಿಯರಾಗಿದ್ದರು. ಮೌಲಾನ ಅಶ್ರಫ್ ಅಲಿ ಅವರು ನಾಲ್ಕು ಮಂದಿ ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ತಮಿಳುನಾಡಿನ ಉತ್ತರ ಆರ್ಕಾಟ್‌ನ ವಿಲಿಂಜಿಪುರಂ(ಬಿಲಂಜ್‌ಪುರ್)ನಲ್ಲಿ 1940ರ ಫೆಬ್ರವರಿ 26ರಂದು ಜನಿಸಿದ್ದ ವೌಲಾನಾ ಅಶ್ರಫ್ ಅಲಿಯವರು, ವೇಲೂರಿನ ಬಾಖಿಯಾತುಸ್ ಸ್ವಾಲಿಹಾತ್ ಮದರಸದಲ್ಲಿ ಆಲಿಮಿಯತ್ ಪದವಿಯನ್ನು ಪಡೆದರು. ಅನಂತರ ಉತ್ತರ ಪ್ರದೇಶದ ದಾರೂಲ್ ಉಲೂಮ್ ದೇವ್‌ಬಂದ್‌ನಲ್ಲಿ ಪಝೀಲತ್ ಮತ್ತು ಇಫ್ತಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದರು. ಆ ಬಳಿಕ ದಾರುಲ್ ಉಲೂಮ್ ಸಬೀಲುರ್ರಶಾದ್‌ನಲ್ಲಿ ತಮ್ಮ ಬೋಧನಾ ವತ್ತಿ ಆರಂಭಿಸಿದ ಅವರು, ಕಳೆದ 50 ವರ್ಷಗಳಿಂದಲೂ ನಿರಂತರವಾಗಿ ವಿದ್ಯಾರ್ಥಿಗಳಿಗೆ ಬುಖಾರಿ ಶರೀಫ್ ಜೊತೆಗೆ ಇನ್ನಿತರ ಗ್ರಂಥಗಳನ್ನು ಬೋಧಿಸುತ್ತಾ ಬಂದಿದ್ದರು.

ಹಝ್ರತ್ ಮುಫ್ತಿ ಅಶ್ರಫ್ ಅಲಿ ಸಾಹೇಬ್‌ರ ನಿಧನ ಮುಸ್ಲಿಮ್ ಸಮುದಾಯಕ್ಕೆ ದೊಡ್ಡ ನಷ್ಟ: ಮುಹಮ್ಮದ್ ಸಾಕಿಬ್

ಹಝ್ರತ್ ಮುಫ್ತಿ ಅಶ್ರಫ್ ಅಲಿ ಸಾಹೇಬ್‌ರವರ ನಿಧನವು ಮುಸ್ಲಿಮ್ ಸಮುದಾಯಕ್ಕೆ ನಿಜಕ್ಕೂ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ, ಬಂಧುಗಳು ಮತ್ತು ಶಿಷ್ಯಂದಿರಿಗೆ ನನ್ನ ಪ್ರಾಮಾಣಿಕ ಸಂತಾಪಗಳು. ಸಮುದಾಯವು ಇಂದು ಅತೀ ಪ್ರಮುಖ ವ್ಯಕ್ತಿಯೋರ್ವರನ್ನು ಕಳೆದುಕೊಂಡಿದೆ. ಸಮುದಾಯಕ್ಕೆ ಮತ್ತು ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳು ಸದಾ ನೆನಪಿನಲ್ಲಿರಲಿವೆ.
ಇನ್ಶಾ ಅಲ್ಲಾಹ್, ಶಿಷ್ಯಂದಿರು ಅವರ ಪರಂಪರೆಯನ್ನು ಮುಂದುವರಿಸಲಿದ್ದಾರೆ. ಅಲ್ಲಾಹನು ಅವರ ಕಾರ್ಯಗಳನ್ನು ಸ್ವೀಕರಿಸಲಿ. ನಾವು ಅವರ ಮಗ್ಫಿರತ್‌ಗಾಗಿ ಪ್ರಾರ್ಥಿಸುತ್ತೇವೆ. ಅಲ್ಲಾಹನು ಪರಲೋಕದಲ್ಲಿ ಅವರಿಗೆ ಉನ್ನತ ದರ್ಜೆಯನ್ನು ನೀಡಲಿ.