ಅಡೆ-ತಡೆಗಳನ್ನು ಮೀರಿ ಯಶಸ್ವಿಯಾದ ಪಾಪ್ಯುಲರ್ ಫ್ರಂಟ್ ದಿಲ್ಲಿ ಸಮಾವೇಶ

Thu, 11/16/2017 - 06:27 -- web editor

ಹೊಸದಿಲ್ಲಿ: 2017ರ ನವೆಂಬರ್ 5ರಂದು ದೆಹಲಿಯ ಶಾಸ್ತ್ರಿ ಉದ್ಯಾನದಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಾ ಸಮಾವೇಶವು ಆಡಳಿತ ಮತ್ತು ಪೊಲೀಸರ ಎಲ್ಲ ಪ್ರಯತ್ನಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಈ ಸಮಾವೇಶ ಸಂಘಟನೆಯ ವಿರುದ್ಧದ ಸುಳ್ಳಾರೋಪಗಳನ್ನು ಬಹಿರಂಗಪಡಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶಾದ್ಯಂತ ಸಂಘಟಿಸಿದ ‘‘ನಮಗೂ ಹೇಳಲಿಕ್ಕಿದೆ’’ ಎಂಬ ಅಭಿಯಾನದ ಭಾಗವಾಗಿತ್ತು.

ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ಮೂಲಕ ಕಾರ್ಯಕ್ರಮವನ್ನು ಹಾಳು ಮಾಡಲು ಆಡಳಿತ ಮತ್ತು ಪೊಲೀಸರು ಪ್ರಯತ್ನಿಸಿದ್ದರು. ಆರಂಭದಲ್ಲಿ ಸಮಾವೇಶ ನಡೆಸಲು ಅನುಮತಿ ನೀಡಿದ್ದ ಪೊಲೀಸರು, ಮಾರನೆಯ ದಿನ ಬೆಳಗ್ಗೆ ಸಮಾವೇಶವನ್ನು ತಡೆಯಲು ಈಗಾಗಲೇ ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳದಲ್ಲಿ ಅಡ್ಡಿಯನ್ನುಂಟು ಮಾಡಲು ಯತ್ನಿಸಿದರು. ಅಂತಿಮವಾಗಿ, ಪಾಪ್ಯುಲರ್ ಫ್ರಂಟ್‌ಗೆ ತಮ್ಮ ಬೆಂಬಲವನ್ನು ಸೂಚಿಸಲು ಶಾಸ್ತ್ರಿ ಪಾರ್ಕ್‌ಗೆ ಬಂದಿದ್ದ ಜನಸಮೂಹದೊಂದಿಗೆ ಪೊಲೀಸ್ ಆಡಳಿತವು ಹೊಂದಿಕೊಳ್ಳಬೇಕಾಯಿತು. ದೆಹಲಿ-ಉತ್ತರ ಪ್ರದೇಶ ಗಡಿ ಮತ್ತು ದೆಹಲಿಯ ವಿವಿಧ ಪ್ರದೇಶಗಳಿಂದ ಸಮಾವೇಶ ಸ್ಥಳಕ್ಕೆ ಬಂದಿದ್ದ 400ಕ್ಕೂ ಮಿಕ್ಕಿದ ಬಸ್ಸುಗಳನ್ನು ತಡೆಹಿಡಿಯಲಾಗಿತ್ತು. ಜನರನ್ನು ಸ್ಥಳಕ್ಕೆ ಬರುವುದನ್ನು ತಡೆಯಲು ಹಲವು ಪ್ರಯತ್ನಗಳು ನಡೆದಿದ್ದವು. ಆದರೆ, ಜನಸಾಮಾನ್ಯರು ತಮ್ಮ ಆದರ್ಶಕ್ಕಾಗಿ ಧೈರ್ಯ ಪ್ರದರ್ಶಿಸಿ, ತಮ್ಮ ಪ್ರಜಾಪ್ರಭುತ್ವ ಹಕ್ಕನ್ನು ನಿಗ್ರಹಿಸಲು ಮಾಡಿದ ಎಲ್ಲಾ ಪ್ರಯತ್ನಗಳನ್ನು ತಡೆದರು.

ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನರು ಭಾಗವಹಿಸಿದ್ದರು. ಇದು ನಿಜಕ್ಕೂ ದೆಹಲಿ ಮತ್ತು ಸುತ್ತಮುತ್ತಲಿನ ಜನರು ಪಾಪ್ಯುಲರ್ ಫ್ರಂಟ್ ವಿರುದ್ಧದ ಸರ್ವ ಆರೋಪಗಳನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಪಾಪ್ಯುಲರ್ ಫ್ರಂಟ್ ಉತ್ತರ ವಲಯಾಧ್ಯಕ್ಷ ಎ.ಎಸ್.ಇಸ್ಮಾಯಿಲ್ ಸಂಘಟನೆಯ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೇಯರ್ ಮೆನ್ ಇ.ಅಬೂಬಕರ್ ಸಮಾವೇಶವನ್ನು ಉದ್ಘಾಟಿಸಿ, ಸಮಾವೇಶದಲ್ಲಿ ಭಾಗವಹಿಸಿದ ಜನರನ್ನ ಶ್ಲಾಘಿಸಿದರು ಮತ್ತು ಅಭಿನಂದಿಸಿದರು. ಜನರ ಹಕ್ಕುಗಳ ರಕ್ಷಣೆಗಾಗಿ ಪಾಪ್ಯುಲರ್ ಫ್ರಂಟ್‌ನ ಬದ್ಧತೆಯನ್ನು ಅವರು ಪುನರುಚ್ಚರಿಸಿದರು ಮತ್ತು ಇಂತಹ ಮಾನಹಾನಿಯ ಅಭಿಯಾನಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಅವರು ಜನರಿಗೆ ಭರವಸೆ ನೀಡಿದರು. ಪ್ರಮುಖ ಭಾಷಣವನ್ನು ಮಾಡಿದ ಪಾಪ್ಯುಲರ್ ಫ್ರಂಟ್‌ನ ಕಾರ್ಯದರ್ಶಿ ಅನೀಸ್ ಅಹ್ಮದ್‌ರವರು, ಫ್ಯಾಶಿಸ್ಟ್ ಪಡೆಗಳ ದುಷ್ಟ ಯೋಜನೆಗಳನ್ನು ಬಹಿರಂಗಪಡಿಸಿದರು ಮತ್ತು ಸಂಘಟನೆಯ ವಿರುದ್ಧದ ಸುಳ್ಳಾರೋಪಗಳ ಹಿಂದಿನ ನೈಜ ಉದ್ದೇಶವನ್ನು ತೆರೆದಿಟ್ಟರು.

ಸಮಾವೇಶದಲ್ಲಿ ಗಣ್ಯ ವ್ಯಕ್ತಿಗಳು ಭಾಗಿಯಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಸಮಾವೇಶಕ್ಕೆ ಅಡ್ಡಿಪಡಿಸಿದ ಆಡಳಿತ ಮತ್ತು ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಪಾಪ್ಯುಲರ್ ಫ್ರಂಟ್ ಮುಖಂಡರಲ್ಲಿ ಮುಖ್ಯ ಅತಿಥಿಗಳು ಒತ್ತಾಯಿಸಿದರು. ಮುಂಬೈ ಹೈಕೋರ್ಟ್ ನಿವತ್ತ ನ್ಯಾಯಮೂರ್ತಿ ಬಿ.ಜಿ.ಕೋಲ್ಸೆ ಪಾಟೀಲ್, ದೆಹಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಆಧ್ಯಕ್ಷ ಡಾ.ಝಫರುಲ್ ಇಸ್ಲಾಮ್ ಖಾನ್, ಮುಸ್ಲಿಮ್ ಪೊಲಿಟಿಕ್ಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ತಸ್ಲೀಮ್ ರಹ್ಮಾನಿ, ದೆಹಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಕಮಲ್ ಫಾರೂಕ್, ಎಸ್‌ಎಎಚ್‌ಆರ್‌ಡಿಸಿ ಕಾರ್ಯಕಾರಿ ನಿರ್ದೇಶಕ ರವಿ ನಾಯರ್, ಎನ್‌ಡಬ್ಲೂಎಫ್ ಪ್ರಧಾನ ಕಾರ್ಯದರ್ಶಿ ಲುಬ್ನಾ ಸಿರಾಜ್, ಎಸ್‌ಡಿಪಿಐ ಅಧ್ಯಕ್ಷ ಎ.ಸಯೀದ್, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಅಧ್ಯಕ್ಷ ಮೌಲಾನ ಅಹ್ಮದ್ ಬೇಗ್ ನದ್ವಿ ಮತ್ತು ಜನ್ ಸಮ್ಮಾನ್ ಪಕ್ಷದ ಸ್ಥಾಪಕ ಅಧ್ಯಕ್ಷ ಅಶೋಕ್ ಭಾರತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಲಯ ಕಾರ್ಯದರ್ಶಿ ಅನೀಸ್ ಅನ್ಸಾರಿ ಸಮಾವೇಶದಲ್ಲಿ ಭಾಗವಹಿಸಿದ ಅತಿಥಿಗಳನ್ನು ಮತ್ತು ಜನರನ್ನು ಸ್ವಾಗತಿಸಿದರು. ಪಾಪ್ಯುಲರ್ ಫ್ರಂಟ್ ದೆಹಲಿ ರಾಜ್ಯಾಧ್ಯಕ್ಷ ಫರ್ವೇಝ್ ಅಹ್ಮದ್ ವಂದಿಸಿದರು.

ಈ ಸಮಾವೇಶವು ದೆಹಲಿಯ ನೆರೆಯ ಪ್ರದೇಶಗಳಲ್ಲಿ ಪಾಪ್ಯುಲರ್ ಫ್ರಂಟ್ ಸಂಘಟನೆಗೆ ಬೆಳೆಯುತ್ತಿರುವ ಬೆಂಬಲ ಮತ್ತು ಸ್ವೀಕೃತಿಯ ಸಂಕೇತವಾಗಿತ್ತು. ಸಮಾವೇಶದಲ್ಲಿ ಭಾಗವಹಿಸದಂತೆ ತಡೆಯಲು ರಚಿಸಿದ ಭಯದ ವಾತಾವರಣದ ನಡುವೆಯೂ ಭಾರೀ ಪ್ರಮಾಣದಲ್ಲಿ ಜನರು ಭಾಗವಹಿಸುವ ಮೂಲಕ ಸಬಲೀಕರಣ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ಪಡೆಯಲು ಪಾಪ್ಯುಲರ್ ಫ್ರಂಟ್‌ನೊಂದಿಗೆ ಕೈಜೋಡಿಸುವ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ.