ಬಾಬರಿ ಮಸ್ಜಿದ್: ಶಿಕ್ಷೆ ಮತ್ತು ಪುನರ್‍ನಿರ್ಮಾಣವನ್ನು ನಾವು ಮರೆಯದಿರೋಣ ಎಂಬುದನ್ನು ನೆನಪಿಸಿದ ಸಂವಾದ ಕೂಟ; ಪುಸ್ತಕ ಮತ್ತು ಭಿತ್ತಿಪತ್ರ ಬಿಡುಗಡೆ

Tue, 12/05/2017 - 11:47 -- web editor

`25ನೇ ವರ್ಷದಲ್ಲಿ ಬಾಬರಿ ಮಸ್ಜಿದ್ ನೆನಪು' ಎಂಬ ವಿಷಯದಲ್ಲಿ ಸಂವಾದ ಕೂಟವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹೊಸದಿಲ್ಲಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂವಾದ ಕೂಟದಲ್ಲಿ ಮುಸ್ಲಿಮ್ ಪೆÇಲಿಟಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ತಸ್ಲೀಂ ರಹ್ಮಾನಿ, ಲೋಕರಾಜ್ ಸಂಘಟನ್ ಅಧ್ಯಕ್ಷ ಶ್ರೀನಿವಾಸನ್ ರಾಘವನ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಮುಫ್ತಿ ಎಜಾಝ್ ಅರ್ಶದ್ ಖಾಸಿಮಿ, ಜನ ಸಮ್ಮಾನ್ ಪಾರ್ಟಿ ಚೆಯರ್‍ಮ್ಯಾನ್ ಅಶೋಕ್ ಭಾರತಿ ಮತ್ತು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಫಿ ಭಾಗವಹಿಸಿದ್ದರು.

ನಿರೂಪಕರಾಗಿ ಚರ್ಚೆಯನ್ನು ಪ್ರಾರಂಭಿಸಿದ ಇ.ಎಂ ಅಬ್ದುರ್ರಹ್ಮಾನ್, ಮಸ್ಜಿದ್ ಧ್ವಂಸಗೊಂಡು 25 ವರ್ಷಗಳು ಕಳೆದರೂ ನ್ಯಾಯಾಂಗಕ್ಕೆ ಅಪರಾಧಿಗಳನ್ನು ಶಿಕ್ಷಿಸಲು ಸಾಧ್ಯವಾಗಿಲ್ಲ. ನಾವು ಪುರಾಣ ಮತ್ತು ನಂಬಿಕೆಗಳ ಹಿಂದೆ ಹೋಗಬೇಕೆ ಅಥವಾ ಸತ್ಯ, ವಾಸ್ತವ ಮತ್ತು ದಾಖಲೆಗಳನ್ನು ಅನುಸರಿಸಬೇಕೆ ಎಂಬುದು ಪ್ರಶ್ನೆಯಾಗಿದೆ ಎಂದು ಗಮನ ಸೆಳೆದರು.

ಚರ್ಚೆಯನ್ನು ಪ್ರಾರಂಭಿಸಿದಾಗ ಚರ್ಚೆಯಲ್ಲಿ ಭಾಗವಹಿಸಿದ್ದವರು, ಈ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಮತ್ತು ವಿವಿಧ ಸ್ವರೂಪಗಳನ್ನು ಬಿಚ್ಚಿಟ್ಟರು. ಈ ವೇಳೆ ಮಾತನಾಡಿದ ಡಾ.ತಸ್ಲೀಮ್ ರಹ್ಮಾನಿ, ಕಾಲು ಶತಮಾನಗಳ ಹಿಂದೆ 1992ರ ಡಿಸೆಂಬರ್ 6ರ ಕರಾಳ ದಿನದಂದು ಏನೆಲ್ಲಾ ನಡೆಯಿತೋ, ಅದರ ಎಲ್ಲಾ ಸುಸ್ಪಷ್ಟ ವಿವರಗಳನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು. ಅಶೋಕ್ ಭಾರತಿ ಮಾತನಾಡಿ, ನಮ್ಮ ವ್ಯವಸ್ಥೆಯಲ್ಲಿ ಮೇಲ್ವರ್ಗದ ಪೂರ್ವಾಗ್ರಹ ಮನೋಸ್ಥಿತಿ ಚೆನ್ನಾಗಿ ಅರಿತುಕೊಳ್ಳಬಹುದಾಗಿದೆ ಮತ್ತು ಇದರಿಂದ ನ್ಯಾಯಾಂಗವು ಕೂಡಾ ಹೊರತಾಗಿಲ್ಲ. ಈ ಕಾರಣದಿಂದ ಬಾಬರಿ ಮಸ್ಜಿದ್ ವಿವಾದವು ಹಲವು ವರ್ಷಗಳಿಂದ ಸುಪ್ರಿಂ ಕೋರ್ಟ್‍ನಲ್ಲಿ ಉಳಿದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವಿಷಯವು ಬಾಬರಿ ಮಸ್ಜಿದ್‍ಗೆ ನ್ಯಾಯವನ್ನು ನೀಡುವುದಕ್ಕೆ ಸೀಮಿತವಾಗಿಲ್ಲ, ಬದಲಾಗಿ ಶೋಷಿತ ವರ್ಗಗಳ ಪರವಾಗಿ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವಂತಹ ದೊಡ್ಡ ದೃಷ್ಟಿಕೋನವನ್ನು ಹೊಂದಿದೆ ಎಂದು ಶ್ರೀನಿವಾಸ್ ರಾಘವನ್ ಅಭಿಪ್ರಾಯವನ್ನು ಮಂಡಿಸಿದರು. ಸಂಘಪರಿವಾರದ ದುಷ್ಟಕೂಟವನ್ನು ವಿರೋಧಿಸುವ ಮಹಾಮೈತ್ರಿಗೆ ಇದೇ ವೇಳೆ ಮುಹಮ್ಮದ್ ಶಫಿ ಕರೆ ನೀಡಿದರು. ಪ್ರಶ್ನೋತ್ತರ ವೇಳೆಯಲ್ಲಿ ಅತಿಥಿಗಳು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಪ್ರಕಟಿಸಲಾದ ಬಾಬರಿ ಮಸ್ಜಿದ್: “ನಾವು ಮರೆಯದಿರೋಣ” ಎಂಬ ಉರ್ದು ಮತ್ತು ಇಂಗ್ಲೀಷ್ ಪುಸ್ತಕವನ್ನು ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ಜಿನ್ನಾ ಬಿಡುಗಡೆಗೊಳಿಸಿದರು. ಪಾಪ್ಯುಲರ್ ಫ್ರಂಟ್ ನಾರ್ಥ್ ಝೋನ್ ಅಧ್ಯಕ್ಷ ಎ.ಎಸ್. ಇಸ್ಮಾಯೀಲ್ ಬಾಬರಿ ಮಸ್ಜಿದ್ ಧ್ವಂಸದ 25ನೇ ವರ್ಷಾಚರಣೆಯ ಸಂದರ್ಭದಲ್ಲಿ ವಿವಿಧ ಭಾಷೆಗಳಲ್ಲಿ ಪ್ರಕಟವಾದ ಪೋಸ್ಟರ್‍ಗಳನ್ನು ಬಿಡುಗಡೆಗೊಳಿಸಿದರು.

ಸಮಾರೋಪ ಭಾಷಣ ಮಾಡಿದ ಮುಹಮ್ಮದ್ ಅಲೀ ಜಿನ್ನಾ, ಸುಳ್ಳು ಸಿದ್ಧಾಂತಗಳ ನಿರಂತರ ಪ್ರಚಾರ ಮತ್ತು ಪುರಾಣಗಳ ಆಧಾರದ ಮೇಲೆ 400 ವರ್ಷಗಳಲ್ಲಿ ಬಲಪಂಥೀಯ ಹಿಂದುತ್ವ ಪಡೆಗಳು ಮಸ್ಜಿದನ್ನು ಧ್ವಂಸ ಮಾಡಬಹುದಾದರೆ, ಸತ್ಯ ಮತ್ತು ಪುರಾವೆಗಳ ಆಧಾರದಿಂದ ಈ ಜಾತ್ಯತೀತ ಪ್ರಜಾಪ್ರಭುತ್ವ ದೇಶದಲ್ಲಿ ಮಸ್ಜಿದನ್ನು ಅದೇ ಸ್ಥಳದಲ್ಲಿ ಪುನರ್‍ನಿರ್ಮಿಸಲು ಯಾಕೆ ಸಾಧ್ಯವಿಲ್ಲವೆಂದು ಪ್ರಶ್ನಿಸಿದರು.