ಸ್ಕೂಲ್ ಚಲೋ ಚಟುವಟಿಕೆಗಳನ್ನು ಬೆಂಬಲಿಸಲು ಪಾಪ್ಯುಲರ್ ಫ್ರಂಟ್ ಮನವಿ

Fri, 12/29/2017 - 06:54 -- web editor

ಹೊಸದಿಲ್ಲಿ: ರಾಷ್ಟ್ರವ್ಯಾಪಿ ನಡೆಯುವ 2018ರ ಸ್ಕೂಲ್‌ಚಲೋ ಶೈಕ್ಷಣಿಕ ಯೋಜನೆಯ ವಿವಿಧ ಚಟುವಟಿಕೆಗಳಿಗೆ ಸಾರ್ವಜನಿಕರು ಉದಾರ ಕೊಡುಗೆಗಳನ್ನು ನೀಡುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೆಯರ್‌ಮೆನ್ ಇ.ಅಬೂಬಕರ್‌ರವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಸೆಕ್ರೆಟರಿಯೇಟ್ ಸಭೆಯು ಮನವಿ ಮಾಡಿದೆ.

ಸಂಘಟನೆಯು ಕಳೆದ ಒಂದು ದಶಕದಿಂದ ವಿವಿಧ ರಾಜ್ಯಗಳಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಅಂಕಿಅಂಶಗಳ ಪ್ರಕಾರ, ಸುಮಾರು ಶೇ.60ರಷ್ಟು ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿರುವುದಿಲ್ಲ ಮತ್ತು ಶೇ.90ರಷ್ಟು ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಗ್ರಾಮಗಳು ಮತ್ತು ನಗರದ ಕೊಳೆಗೇರಿ ಪ್ರದೇಶದಲ್ಲಿರುವ ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಗಳಿಗೆ ದಾಖಲಾಗುತ್ತಿಲ್ಲ. ಪಾಪ್ಯುಲರ್ ಫ್ರಂಟ್ ಪ್ರತಿ ವರ್ಷ ಶಾಲೆ ಪ್ರಾರಂಭದ ಮೊದಲೇ ಎರಡು ತಿಂಗಳುಗಳ ಕಾಲ ಸಾಕ್ಷರತೆ ಮತ್ತು ಶೈಕ್ಷಣಿಕ ಸಮೀಕ್ಷೆಯಂತಹ ಚಟುವಟಿಕೆಗಳನ್ನು ನಡೆಸಿ ಮಕ್ಕಳು ಮತ್ತು ಪೋಷಕರನ್ನು ಭೇಟಿ ಮಾಡಿ ಕೌಟುಂಬಿಕ ಸಾಕ್ಷರತೆ, ಶಾಲೆ ತೊರೆದ ಮಕ್ಕಳ ಗುರುತಿಸುವಿಕೆ, ಶಾಲೆಗೆ ಸೇರಿಸಲು ಪ್ರೇರಣೆ ಹಾಗೂ ಮರುದಾಖಲಾತಿಗೆ ಬೇಕಾದ ಸಹಾಯ ಮುಂತಾದ ಚಟುವಟಿಕೆಗಳನ್ನು ನಡೆಸುತ್ತದೆ.

ಎಂದಿನಂತೆ ಈ ವರ್ಷವು ಜಾಗತಿ ಕಾರ್ಯಕ್ರಮಗಳ ಜೊತೆಗೆ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಸ್ತುಗಳನ್ನು ಹೊಂದಿರುವ ಸ್ಕೂಲ್ ಕಿಟ್‌ನ್ನು ಕೂಡಾ ವಿತರಿಸಲಾಗುವುದು. ಈ ಅಭಿಯಾನವು ಜನವರಿ - ಫೆಬ್ರವರಿಯಲ್ಲಿ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮತ್ತು ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಇತರ ರಾಜ್ಯಗಳಲ್ಲಿ ನಡೆಯಲಿರುವುದು. ವರ್ಷ ಪೂರ್ತಿ ಈ ಕಾರ್ಯಕ್ರಮದ ಅನುಷ್ಠಾನ ಪ್ರಕ್ರಿಯೆ ಜಾರಿಯಲ್ಲಿದ್ದು, ಅದರ ಅಂಗವಾಗಿ ಕೆಲವು ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಸರ್ವ ಶಿಕ್ಷಾ ಗ್ರಾಮ ಮತ್ತು ಟ್ಯೂಷನ್ ಕೇಂದ್ರಗಳನ್ನು ತೆರಯಲಾಗುತ್ತದೆ. ಈ ಯೋಜನೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಎಜ್ಯುಕೇರ್ ಫಂಡ್ ಎಂಬ ವಿಶೇಷ ನಿಧಿಯನ್ನು ರಚಿಸಿದ್ದು ಈ ಮಾನವೀಯ ಸೇವೆಗೆ ಸಾರ್ವಜನಿಕರು ಉದಾರವಾಗಿ ಸಹಾಯ ಮಾಡುವಂತೆ ಇ. ಅಬೂಬಕರ್ ಪತ್ರಿಕಾ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.