ಕೇರಳ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ - ದೇಶಾದ್ಯಂತ ನೆರವಿಗಾಗಿ ಪಾಪ್ಯುಲರ್ ಫ್ರಂಟ್ ಮನವಿ

Fri, 08/24/2018 - 09:56 -- web editor

ಕೇರಳದಲ್ಲಿ ಸಂಭವಿಸಿದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸೆಕ್ರೇಟರಿಯೇಟ್ ಸಭೆಯು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ ಮತ್ತು ರಾಜ್ಯವನ್ನು ಪುನರ್‌ನಿರ್ಮಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ನೆರವನ್ನು ನೀಡಬೇಕೆಂದು ದೇಶಾದ್ಯಂತ ಜನರಲ್ಲಿ ಅದು ಮನವಿ ಮಾಡಿದೆ.

ಇದು ಕಳೆದ ನೂರು ವರ್ಷಗಳಲ್ಲಿ ಕೇರಳ ಕಂಡ ಭೀಕರ ಪ್ರವಾಹವಾಗಿದ್ದು, ಇದರಿಂದಾಗಿ ರಾಜ್ಯವು ಸಂಪೂರ್ಣವಾಗಿ ವಿನಾಶವಾಗಿಬಿಟ್ಟಿದೆ. ಆದಾಗ್ಯೂ ಆಡಳಿತ ವರ್ಗ, ಸಾಮಾಜಿಕ, ರಾಜಕೀಯ, ಧಾರ್ಮಿಕ ಸಂಘಟನೆಗಳು, ಸ್ಥಳೀಯ ಗುಂಪುಗಳು ಮತ್ತು ಸಾರ್ವಜನಿಕರು ಹೆಗಲಿಗೆ ಹೆಗಲುಕೊಟ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈಗಲೂ ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಂಡು ತಮ್ಮ ಮನೆಗಳಲ್ಲಿ ಮತ್ತು ಕಟ್ಟಡಗಳಲ್ಲಿ ಭಯಭೀತರಾಗಿರುವ ಸಾವಿರಾರು ಮಂದಿ ತಮ್ಮ ಬಳಿಗೆ ರಕ್ಷಣಾಕರ್ಮಿಗಳು ತಲುಪುವುದನ್ನು ನಿರೀಕ್ಷಿಸುತ್ತಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, 350ಕ್ಕಿಂತಲೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಮತ್ತು 6.5 ಲಕ್ಷಕ್ಕಿಂತಲೂ ಹೆಚ್ಚು ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ. ಒಟ್ಟು ಸುಮಾರು 20,000 ಕೋಟಿ ನಷ್ಟ ಎಂದು ಅಂದಾಜಿಸಲಾಗಿದೆ. ಆದರೆ ವಾಸ್ತವದಲ್ಲಿ ಸಂಭವಿಸಿರುವ ನಷ್ಟವು ಇದಕ್ಕಿಂತಲೂ ಅಧಿಕವಾಗಿರಬಹುದು. 13 ಜಿಲ್ಲೆಗಳ ಸಾವಿರಾರು ಗ್ರಾಮಗಳಲ್ಲಿ ಇದರ ದುಷ್ಪರಿಣಾಮ ಬೀರಿದೆ. ಪ್ರವಾಹ ಕೊನೆಗೊಂಡಿದ್ದರೂ ಬದುಕಿನ ಪುನರ್ವಸತಿ ಮತ್ತು ಪುನಶ್ಚೇತನವು ರಾಜ್ಯದ ಜನತೆಗೆ ಒಂದು ಸವಾಲಾಗಿ ಉಳಿದಿದೆ.

ದುರದಷ್ಟವಶಾತ್, ಈ ವೇಳೆ ರಾಜ್ಯ ಸರಕಾರದೊಡನೆ ಕೇಂದ್ರ ಸರಕಾರವು ತಣ್ಣಗೆ ಹಾಗೂ ನೀರಸವಾಗಿ ಪ್ರತಿಕ್ರಿಯಿಸಿದೆ. ಘೋಷಿಸಿದ ಪರಿಹಾರ ನಿಧಿಯು ಅಗತ್ಯಕ್ಕಿಂತಲೂ ತುಂಬಾ ಅಂತರದಲ್ಲಿದೆ. ಇದು ಕೇಂದ್ರ ಸರಕಾರವು ದಕ್ಷಿಣ ಭಾರತದ ರಾಜ್ಯಗಳೊಡನೆ ಅನುಸರಿಸುತ್ತಿರುವ ಮಲತಾಯಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಮತ್ತು ಪ್ರಾಥಮಿಕ ನೆರವಿಗಾಗಿ ರಾಜ್ಯ ಸರಕಾರವು ಬೇಡಿಕೆಯಿಟ್ಟ 2000 ಕೋಟಿ ರೂಪಾಯಿಯನ್ನು ರಾಜ್ಯಕ್ಕೆ ಬಿಡುಗಡೆಗೊಳಿಸಬೇಕೆಂದು ನಾವು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಕಾಲಿಕ ಪರಿಣಾಮಕಾರಿ ಪ್ರತಿಕ್ರಿಯೆಯು ಹಲವು ಸಾವು-ನೋವುಗಳನ್ನು ಕಡಿಮೆಗೊಳಿಸುತ್ತಿತ್ತು ಮತ್ತು ಪರಿಸ್ಥಿತಿಯನ್ನು ತುಂಬಾ ಮುಂಚಿತವಾಗಿ ನಿಯಂತ್ರಣಕ್ಕೆ ತರುತ್ತಿತ್ತು.

ರಾಜ್ಯವನ್ನು ಸಹಜ ಸ್ಥಿತಿಗೆ ತರಲು ಪರಿಹಾರ ಹಾಗೂ ಪುನರ್ವಸತಿಯ ಅನುಕರಣೀಯ ಸೇವೆಯಲ್ಲಿ ತೊಡಗಿದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಮತ್ತು ಬದುಕಿನ ವಿವಿಧ ಕ್ಷೇತ್ರಗಳಲ್ಲಿನ ಕೇರಳದ ಜನತೆಯನ್ನು ರಾಷ್ಟ್ರೀಯ ಸೆಕ್ರೇಟರಿಯೇಟ್ ಸಭೆಯು ಶ್ಲಾಘಿಸಿದೆ. ಸಂಘಟನೆಯ ಕೇಂದ್ರೀಯ ನಿಧಿಯಿಂದ 25 ಲಕ್ಷ ರೂಪಾಯಿಯನ್ನು ಸಂಘಟನೆಯ ರಾಜ್ಯ ಸಮಿತಿಯ ‘‘ಕೇರಳ ನೆರೆ ಪರಿಹಾರ ನಿಧಿ’’ಗೆ ಹಸ್ತಾಂತರಿಸಲಾಯಿತು. ದೇಶಾದ್ಯಂತವಿರುವ ಪ್ರತಿಯೋರ್ವ ಸದಸ್ಯನೂ ತಮ್ಮ ಒಂದು ದಿನದ ವೇತನವನ್ನು ಈ ಪರಿಹಾರ ನಿಧಿಗೆ ಕಾಣಿಕೆಯಾಗಿ ನೀಡಲಿದ್ದಾರೆ ಮತ್ತು ಪಾಪ್ಯುಲರ್ ಫ್ರಂಟ್‌ನ ಸದಸ್ಯರು ದೇಶಾದ್ಯಂತ ಪರಿಹಾರ ನಿಧಿ ಸಂಗ್ರಹಿಸಲು ಜನರ ಬಳಿಗೂ ಬರಲಿದ್ದಾರೆ. ಪಾಪ್ಯುಲರ್ ಫ್ರಂಟ್‌ನ ನೆರೆ ಪರಿಹಾರ ಕಾರ್ಯಾಚರಣೆಗೆ ಆಸಕ್ತಿಯಿಂದ ಬೆಂಬಲಿಸಲು ಕೇಂದ್ರೀಯ ಸೆಕ್ರೇಟರಿಯೇಟ್ ಸಭೆಯು ದೇಶದ ಎಲ್ಲಾ ರಾಜ್ಯಗಳ ಜನರಲ್ಲಿ ಮನವಿ ಮಾಡಿದೆ.

ಚೆಯರ್‌ಮೇನ್ ಇ.ಅಬೂಬಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ, ಒ.ಎಂ.ಎ.ಸಲಾಮ್, ಅನೀಸ್ ಅಹ್ಮದ್, ಅಬ್ದುಲ್ ವಾಹಿದ್ ಸೇಠ್, ಕೆ.ಎಂ. ಶರೀಫ್ ಮತ್ತು ಇ.ಎಂ. ಅಬ್ದುಲ್ ರಹ್ಮಾನ್ ಭಾಗವಹಿಸಿದ್ದರು.

ಮಾಧ್ಯಮ ಸಂಯೋಜಕರು
ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ
ಕರ್ನಾಟಕ ರಾಜ್ಯ