ಪಾಪ್ಯುಲರ್ ಫ್ರಂಟ್ ಮೇಲಿನ ನಿಷೇಧವನ್ನು ಜಾರ್ಖಂಡ್ ಹೈಕೋರ್ಟ್ ರದ್ದುಗೊಳಿಸಿದೆ: ಸಂಘಟನೆಯ ವಿರುದ್ಧ ಅಪ್ರಜಾಸತ್ತಾತ್ಮಕ ಕ್ರಮಗಳನ್ನು ಕೊನೆಗೊಳಿಸುವಂತೆ ಆಗ್ರಹ

Wed, 08/29/2018 - 09:53 -- web editor

ಆಗಸ್ಟ್ 20, 2018ರಂದು ಕ್ಯಾಲಿಕಟ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾದ ಹೇಳಿಕೆ

ಜಾರ್ಖಂಡ್ ಹೈಕೋರ್ಟ್ ತನ್ನ ಮಹತ್ವದ ತೀರ್ಪೊಂದರಲ್ಲಿ, ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಚಟುವಟಿಕೆಗಳ ಮೇಲೆ ರಾಜ್ಯ ಸರಕಾರವು ಹೇರಿದ್ದ ನಿಷೇಧವನ್ನು ‘‘ನಿರಂಕುಶ, ನ್ಯಾಯಸಮ್ಮತವಲ್ಲದ ಮತ್ತು ಕಾನೂನಿನ ಪಾವಿತ್ರತೆಯ ವಿರುದ್ಧ’ ಎಂದು ತಿಳಿಸುತ್ತಾ ರದ್ದುಗೊಳಿಸಿದೆ. ನಿಷೇಧದೊಂದಿಗೆ ಸೇರಿದ ಎಲ್ಲಾ ಪ್ರಕರಣಗಳನ್ನೂ ಕೋರ್ಟ್ ರದ್ದುಗೊಳಿಸಿದೆ. ಸರಕಾರವು ಜನಾಂದೋಲನವೊಂದರ ಮೇಲೆ ಭಯೋತ್ಪಾದನೆಯ ಸಂಬಂಧ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿತ್ತು. ಆದರೆ ಅದು ಕೋರ್ಟ್‌ನ ಮುಂದೆ ಯಾವುದೇ ಸಾಕ್ಷ್ಯಾಧಾರಗಳನ್ನು ಪ್ರಸ್ತುತಪಡಿಸಲು ವಿಫಲವಾಯಿತು. ಹೀಗೆ ಈ ನೈಜತೆಯು ಜಾರ್ಖಂಡ್ ಸರಕಾರದ ಅಪವಿತ್ರ ಪ್ರಯತ್ನಗಳನ್ನು ಬಹಿರಂಗಗೊಳಿಸುತ್ತದೆ.

ಈ ತೀರ್ಪನ್ನು ಕೇವಲ ಪಾಪ್ಯುಲರ್ ಫ್ರಂಟ್‌ನೊಂದಿಗೆ ಜೋಡಿಸಿ ನೋಡಲಾಗುವುದಿಲ್ಲ. ಬದಲಾಗಿ ಇದನ್ನು ಅಭಿವ್ಯಕ್ತಿ ಸ್ವಾತಂತ್ರ ಮತ್ತು ಸಂಘಟನೆ ರಚಿಸುವ ಸ್ವಾತಂತ್ರದ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಕುರಿತ ಒಂದು ಮಹತ್ವದ ನ್ಯಾಯಿಕ ಹಸ್ತಕ್ಷೇಪದ ರೂಪದಲ್ಲಿ ಎಂದಿಗೂ ನೆನಪಿನಲ್ಲಿಡಬೇಕಾಗಿದೆ. ರಾಜ್ಯದಲ್ಲಿ ನಿಷೇಧ ಹೇರಲಾದ ಸಂಘಟನೆಗಳಲ್ಲಿ ಪಾಪ್ಯುಲರ್ ಫ್ರಂಟ್ ಮೊದಲದ್ದೇನಲ್ಲ. ಬದಲಿಗೆ ರಾಜ್ಯ ಸರಕಾರದ ಅಪರಾಧಿಕ ಕಾನೂನು (ತಿದ್ದುಪಡಿ) ಕಾಯ್ದೆ 1908ರ ಪರಿಚ್ಛೇಧ 16ರ ದುರ್ಬಳಕೆ ಮಾಡುತ್ತಾ ವಿನಾಕಾರಣ ರಾಜ್ಯದಲ್ಲಿ ಕಾರ್ಮಿಕ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳನ್ನು ನಿಷೇಧಿಸಲಾಗಿದೆ. ಸರಕಾರದ ಜನವಿರೋಧಿ ಮತ್ತು ನವ ಉದಾರವಾದಿ ನೀತಿಗಳ ಕುರಿತು ಪ್ರಶ್ನಿಸುವ ಧೈರ್ಯ ಪ್ರದರ್ಶಿಸಿದ ಕಾರಣಕ್ಕಾಗಿಯೇ ಹೆಚ್ಚಿನ ಪ್ರಕರಣಗಳಲ್ಲಿ ಅವರು ನಿಷೇಧವನ್ನು ಎದುರಿಸಬೇಕಾಗಿ ಬಂದಿತ್ತು. ಅದಕ್ಕಾಗಿ ಈ ತೀರ್ಪು ವಿರೋಧಿಗಳ ಧ್ವನಿಯನ್ನು ದಮನಿಸುವ ಮತ್ತು ಅವರನ್ನು ತಡೆಯುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಯತ್ನಗಳಿಗೆ ಒಂದು ಬಹಿರಂಗ ಎಚ್ಚರಿಕೆಯಾಗಿದೆ.

ಸಂಘಟನೆಯೊಂದು ಸರಕಾರವು ಹೇರಿದ್ದ ನಿಷೇಧಕ್ಕೆ ವಿರುದ್ಧವಾಗಿ ಕಾನೂನಾತ್ಮಕವಾಗಿ ಗೆಲುವು ಸಾಧಿಸಿದ ಘಟನೆಯು ಜಾರ್ಖಂಡ್‌ನಲ್ಲಿ ಇದೇ ಮೊದಲಬಾರಿಗೆ ನಡೆದಿರುವುದು. ಜಾರ್ಖಂಡ್ ರಾಜ್ಯ ಸರಕಾರದ ವಿರುದ್ಧ ಪಾಪ್ಯುಲರ್ ಫ್ರಂಟ್‌ನ ಕಾನೂನು ಹೋರಾಟಕ್ಕೆ ದೊರಕಿದ ಅನನ್ಯ ಗೆಲುವು ಖಂಡಿತವಾಗಿ ನ್ಯಾಯಕ್ಕಾಗಿ ನಡೆಯುತ್ತಿರುವ ಎಲ್ಲಾ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಉತ್ತೇಜನವನ್ನು ನೀಡಿದೆ. ಇದರಿಂದ ನ್ಯಾಯಾಂಗದ ಮೇಲಿನ ಜನರ ನಿರೀಕ್ಷೆಗೆ ಮತ್ತಷ್ಟು ಬಲ ಸಿಗಲಿದೆ. ನಿಷೇಧದ ವಿರುದ್ಧ ನಮ್ಮೊಂದಿಗೆ ಕೈಜೋಡಿಸಿದ ದೇಶಾದ್ಯಂತದ ಎಲ್ಲಾ ಜನರು, ಸಾಮಾಜಿಕ, ಮಾನವಹಕ್ಕು ಗುಂಪುಗಳು ಮತ್ತು ಸಾಮುದಾಯಿಕ ಸಂಘಟನೆಗಳಿಗೆ ನಾವು ಧನ್ಯವಾದವನ್ನು ಸಲ್ಲಿಸುತ್ತೇವೆ. ಸಂಘಟನೆಯ ತೇಜೋವಧೆ ನಡೆಸುವ ಮತ್ತು ಅದರ ಕಾರ್ಯಚಟುವಟಿಕೆಗಳನ್ನು ತಡೆಯುವ ಪ್ರಯತ್ನಗಳು ಈಗಲೂ ಮುಂದುವರಿದಿವೆ. ಇಂಥದ್ದರಲ್ಲಿ, ಪಾಪ್ಯುಲರ್ ಫ್ರಂಟ್ ಕಾನೂನಿನ ಅದಾಲತ್‌ನ ಮುಂದೆ ತನ್ನ ಹೆಸರನ್ನು ಶುದ್ಧವಾಗಿಟ್ಟುಕೊಂಡು ಹೊರ ಬಂದಿದೆ ಎಂಬ ವಿಚಾರವನ್ನು ಅಧಿಕಾರಿಗಳು ಮತ್ತು ಈ ಅಭಿಯಾನದಲ್ಲಿ ಕೈಜೋಡಿಸಿರುವ ಮಾಧ್ಯಮಗಳ ಒಂದು ವರ್ಗಕ್ಕೆ ತಿಳಿಸಲು ನಾವು ಬಯಸುತ್ತೇವೆ. ಈ ತೀರ್ಪನ್ನು ಮುಂದಿಟ್ಟುಕೊಂಡು ನಾವು ಕೇಂದ್ರ ಮತ್ತು ರಾಜ್ಯ ಸರಕಾರಗಳು ಪಾಪ್ಯುಲರ್ ಫ್ರಂಟ್ ವಿರುದ್ಧದ ಎಲ್ಲಾ ದಮನಕಾರಿ ಮತ್ತು ಅಪ್ರಜಾಸತ್ತಾತ್ಮಕ ಕ್ರಮಗಳನ್ನು ಕೊನೆಗೊಳಿಸುವಂತೆ ಒತ್ತಾಯಿಸುತ್ತಿದ್ದೇವೆ.

ಪತ್ರಿಕಾಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಚೆಯರ್‌ಮೇನ್ ಇ.ಅಬೂಬಕರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಇ.ಎಂ.ಅಬ್ದುರ್ರಹ್ಮಾನ್ ಮತ್ತು ಕೇರಳ ರಾಜ್ಯಾಧ್ಯಕ್ಷ ನಸೀರುದ್ದೀನ್ ಎಳಮರಂ ಮಾತನಾಡಿದರು.

ಮಾಧ್ಯಮ ಸಂಯೋಜಕರು
ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ
ಕರ್ನಾಟಕ ರಾಜ್ಯ