ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಹೇರಲಾಗುತ್ತಿದೆ: ಪಾಪ್ಯುಲರ್ ಫ್ರಂಟ್

Thu, 08/30/2018 - 13:03 -- web editor

ದೇಶದ ಹಲವೆಡೆ ಏಕಕಾಲಕ್ಕೆ ಪುಣೆ ಪೊಲೀಸರಿಂದ ನಡೆದ ಖ್ಯಾತ ಮಾನವ ಹಕ್ಕು ಹೋರಾಟಗಾರರ ಹಾಗೂ ಶಿಕ್ಷಣ ತಜ್ಞರ ಬಂಧನ ಸರಣಿಯನ್ನು ಮತ್ತು ಅವರ ನಿವಾಸಗಳ ಮೇಲಿನ ದಾಳಿಯನ್ನು ಪಾಪ್ಯುಲರ್ ಫ್ರಂಟ್ ಕೇಂದ್ರೀಯ ಸೆಕ್ರಟರಿಯೇಟ್ ಸಭೆಯು ಖಂಡಿಸಿದೆ. ಈ ನಡೆಯು ಪೊಲೀಸ್ ಇಲಾಖೆ ಮತ್ತು ತನಿಖಾ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಘೋಷಿತ ತುರ್ತುಪರಿಸ್ಥಿತಿಯನ್ನು ಹೇರುವುದರ ಮತ್ತೊಂದು ಪ್ರಯತ್ನದ ನಿದರ್ಶನವಾಗಿದೆ ಎಂದು ಸಭೆ ಹೇಳಿದೆ.

ದಮನಕ್ಕೊಳಗಾದ ವರ್ಗದ ಮಾನವ ಹಕ್ಕುಗಳಿಗಾಗಿ ನಡೆಸಿದ ಹೋರಾಟಗಳಿಂದಾಗಿ ಹಾಗೂ ಶೈಕ್ಷಣಿಕ ಕೊಡುಗೆಗಳಿಂದಾಗಿ ಜನರಿಂದ ಅಪಾರ ಗೌರವಾದರಕ್ಕೊಳಗಾದ ವಕೀಲರು, ಬುದ್ಧಿಜೀವಿಗಳು ಮತ್ತು ಸಾಮಾಜಿಕ ಹೋರಾಟಗಾರರು ಈ ಕ್ರಮಕ್ಕೆ ಗುರಿಯಾದವರಾಗಿದ್ದಾರೆ. ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿರುವ ಯಾವುದೇ ಕಾರ್ಯದಲ್ಲಿ ಇವರು ಪರೋಕ್ಷವಾಗಿ ಎಂದೂ ಸಂಬಂಧ ಹೊಂದಿದವರಲ್ಲ ಎಂದು ಗಮನಿಸಬಹುದಾಗಿದೆ. ಪೊಲೀಸರ ದಾಳಿ ಮತ್ತು ಬಂಧನದ ರೀತಿಯು ಅಧಿಕಾರದ ಸ್ಪಷ್ಟ ದುರುಪಯೋಗವಾಗಿದೆ. ಅವರಲ್ಲಿ ಕೆಲವರನ್ನು ತಮ್ಮ ವಿದ್ಯಾರ್ಥಿಗಳ ಮತ್ತು ಸಂಬಂಧಿಕರ ಸಮ್ಮುಖದಲ್ಲೇ ಅವಮಾನಕರ ರೀತಿಯಲ್ಲಿ ವಿಚಾರಣೆಗೊಳಪಡಿಸಲಾಗಿದೆ. ಅವರ ಮೇಲಿನ ಆರೋಪಗಳು ಯಾವುದೇ ರೀತಿಯಲ್ಲೂ ಒಪ್ಪಲಾಗದ್ದು ಮತ್ತು ಜನರು ಸಾರಾಸಗಟಾಗಿ ತಿರಸ್ಕರಿಸುವಂತಹದ್ದಾಗಿದೆ.

ತುರ್ತುಪರಿಸ್ಥಿತಿಯ ಕಠೋರ ದಿನಗಳನ್ನು ನೆನಪಿಸುವಂತೆ, ವಿರೋಧಿಗಳನ್ನು ಭೀತಿಪಡಿಸುವ ಮತ್ತು ಮೌನಗೊಳಿಸುವ ಅಧಿಕಾರದ ಈ ರೀತಿಯ ದುರುಪಯೋಗವು ಬಹಳ ಅಪಾಯಕಾರಿಯಾಗಿದೆ ಎಂಬುದು ಬೆಳಕಿನಷ್ಟೇ ಸ್ಪಷ್ಟವಾಗಿದೆ. ವ್ಯವಸ್ಥೆಯನ್ನು ಕುಗ್ಗಿಸುತ್ತಿರುವ ಇಂತಹ ಪ್ರಯತ್ನಗಳನ್ನು ಸರ್ವೋಚ್ಛ ನ್ಯಾಯಾಲಯವು ತನ್ನ ಅಧಿಕಾರ ಬಳಸಿ ತಡೆಯಬೇಕೆಂದು ಪಾಪ್ಯುಲರ್ ಫ್ರಂಟ್ ಸೆಕ್ರಟರಿಯೇಟ್ ಸಭೆಯು ಒತ್ತಾಯಿಸಿದೆ. ಅಧಿಕಾರ ಕೇಂದ್ರಗಳ ಮುಂದೆ ವಿರೋಧ ಪಕ್ಷಗಳು ಕೂಡ ಸತ್ಯವನ್ನು ಹೇಳಲು ಧ್ವನಿಯೆತ್ತಬೇಕೆಂದು ಸಭೆ ಕೇಳಿಕೊಂಡಿದೆ.

ಚೆಯರ್‌ಮೆನ್ ಇ.ಅಬೂಬಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಂ.ಮುಹಮ್ಮದ್ ಅಲಿ ಜಿನ್ನಾ, ಇ.ಎಂ.ಅಬ್ದುರ್ರಹ್ಮಾನ್, ಕೆ.ಎಂ.ಶರೀಫ್, ಒ.ಎಂ.ಎ.ಸಲಾಂ, ಅಬ್ದುಲ್ ವಾಹಿದ್ ಸೇಠ್ ಉಪಸ್ಥಿತರಿದ್ದರು.