ಪುಣೆ ಪೊಲೀಸರ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು ನಿರಾಶಾದಾಯಕ: ಪಾಪ್ಯುಲರ್ ಫ್ರಂಟ್

Wed, 10/03/2018 - 10:48 -- web editor

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕು ಕಾರ್ಯಕರ್ತರಾದ ಗೌತಮ್ ನವಲಾಖ, ಸುಧಾ ಭಾರದ್ವಾಜ್, ವರವರರಾವ್, ಅರುಣ್ ಫೆರೀರಿಯಾ ಮತ್ತು ವೆರ್ನಾನ್ ಗೊನ್ಸಾಲ್ವೆನ್ಸ್ ಅವರ ವಿರುದ್ಧ ಯುಎಪಿಎ ಕಠಿಣ ಕಾನೂನುಗಳಡಿ ತಮ್ಮ ಸಂಶಯಾಸ್ಪದ ತನಿಖೆ ಮುಂದುವರಿಸಲು ಸುಪ್ರೀಂ ಕೋರ್ಟ್ ಪುಣೆ ಪೊಲೀಸರಿಗೆ ಅನುಮತಿ ನೀಡಿರುವ ತೀರ್ಪಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮೇನ್ ಇ.ಅಬೂಬಕರ್ ನಿರಾಶೆ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು, ಪುಣೆ ಪೊಲೀಸರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿರುವುದರ ಹೊರತಾಗಿಯೂ ಮೇಲ್ನೋಟದ ಆಧಾರದಲ್ಲಿ ವಿಚಾರಣೆ ನಡೆಸಿದೆ ಮತ್ತು ರೋಮಿಲಾ ಥಾಪರ್, ದೇವಿಕಾ ಜೈನ್, ಸತೀಶ್ ದೇಶಪಾಂಡೆ, ಪ್ರಭಾತ್ ಪಾಟ್ನಾಯಕ್ ಹಾಗೂ ಮಜ ದರುವಾಲಾರವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿರುವುದು ಕಳವಳಕಾರಿಯಾಗಿದೆ. ದೇಶದಲ್ಲಿ ಪೊಲೀಸರು ಮತ್ತು ಬಲಪಂಥೀಯ ಗೂಂಡಾಗಳನ್ನು ಬಳಸಿಕೊಂಡು ಪ್ರಜಾಸತ್ತಾತ್ಮಕ ಅಸಹಮತವನ್ನು ದಮನಿಸುವ ಅಧಿಕಾರದಲ್ಲಿರುವವರ ವ್ಯವಸ್ಥಿತ ಪ್ರಯತ್ನಗಳನ್ನು ಅರಿಯುವಲ್ಲಿ ಸುಪ್ರೀಂಕೋರ್ಟ್ ವಿಫಲವಾಗಿರುವುದು ದುರದೃಷ್ಟಕರವಾಗಿದೆ. ಹೋರಾಟಗಾರರ ವಿರುದ್ಧ ಸುಳ್ಳು ಸಾಕ್ಷ ಸೃಷ್ಟಿಸುವುದು, ಸಮಾಜದ ಪ್ರಮುಖ ವ್ಯಕ್ತಿಗಳ ವರ್ಚಸ್ಸಿಗೆ ಧಕ್ಕೆ ತರುವುದು ಮತ್ತು ಮಾಧ್ಯಮವನ್ನು ದಮನಿಸುವುದು ಸೇರಿದಂತೆ ಅಪ್ರಜಾಸತ್ತಾತ್ಮಕ ಹಾದಿಗಳನ್ನು ಪುಣೆ ಪೊಲೀಸರು ಬಳಸಿಕೊಂಡಿದ್ದಾರೆ. ತನಿಖೆಯನ್ನು ಒಂದು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸುವ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿರುವುದು ಕೂಡ ಅಚ್ಚರಿದಾಯಕವಾಗಿದೆ. ಇದು ಪುಣೆ ಪೊಲೀಸರಿಗೆ ನಿರ್ಭೀತಿಯನ್ನು ನೀಡಿರುವುದಕ್ಕೆ ಸಮಾನಾಗಿದೆ.

ಪ್ರಕರಣದಲ್ಲಿ ಯುಎಪಿಎಯಂತಹ ಕಠಿಣ ಕಾನೂನುಗಳನ್ನು ಬಳಸಿರುವುದನ್ನು ಪ್ರಶ್ನಿಸಿರುವ ಇ ಅಬೂಬಕರ್ ಅವರು, ಯುಎಪಿಎಯಂತಹ ಕಾನೂನುಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಕಳಂಕವಾಗಿದೆ. ಈ ಕಾನೂನು ಆರೋಪಿಗಳ ಮೂಲಭೂತ ಹಕ್ಕುಗಳನ್ನು ದಮನಿಸುವುದು ಮತ್ತು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡುವುದರಿಂದ ಸಾರ್ವಜನಿಕರನ್ನು ನಿಗ್ರಹಿಸಲು ಅದು ದೇಶದಲ್ಲಿ ವ್ಯಾಪಕವಾಗಿ ದುರುಪಯೋಗವಾಗುತ್ತಿದೆ. ಯುಎಪಿಎ ಪ್ರಕರಣಗಳಲ್ಲಿ ಹೆಚ್ಚಿನವು ಆರೋಪಿಗಳ ಖುಲಾಸೆಗಳೊಂದಿಗೆ ಅಂತ್ಯ ಕಂಡಿರುವುದನ್ನು ಅಧ್ಯಯನಗಳಿಂದ ತಿಳಿಯಬಹುದು ಎಂದು ಇ.ಅಬೂಬಕರ್ ಹೇಳಿದ್ದಾರೆ.