ಲವ್ ಜಿಹಾದ್ ಕಟ್ಟು ಕತೆ ಎಂದು ಮತ್ತೆ ಖಚಿತಪಡಿಸಿದ ಎನ್ಐಎ ಶೋಧನೆ: ಪಾಪ್ಯುಲರ್ ಫ್ರಂಟ್

Thu, 10/25/2018 - 08:46 -- web editor

ಲವ್ ಜಿಹಾದ್ ನ ಅಸ್ತಿತ್ವವಿಲ್ಲದಿರುವ ಕುರಿತಂತೆ ಎನ್ ಐ ಎ ಶೋಧನೆ ಸತ್ಯಕ್ಕೆ ದೊರೆತ ಗೆಲುವು ಮತ್ತು ಮಿಥ್ಯವನ್ನೇ ಜೀವಾಳವಾಗಿಸಿಕೊಂಡಿರುವ ಶಕ್ತಿಗಳಿಗೆ ನೀಡಿದ ಹೊಡೆತವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಮಾಧ್ಯಮ ಮತ್ತು ಫ್ಯಾಸಿಸ್ಟ್ ಶಕ್ತಿಗಳಿಂದ ಲವ್ ಜಿಹಾದ್ ನಂತೆ ಪ್ರಚಾರಪಡಿಸಲಾದ ಬಲವಂತದ ಮತಾಂತರದ ವ್ಯವಸ್ಥಿತ ಪಿತೂರಿಗೆ, 11 ಅಂತರ್ಧರ್ಮೀಯ ವಿವಾಹಗಳ ಬಗ್ಗೆ ತನಿಖೆ ನಡೆಸಿದ ಬಳಿಕವೂ ಎನ್ಐಎಗೆ ಯಾವುದೇ ಸಾಕ್ಷ್ಯಾಧಾರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಈಗಾಗಲೇ ಲವ್ ಜಿಹಾದ್ ಬಗ್ಗೆ ತನಿಖೆ ನಡೆಸಿರುವ ಕೇರಳ ಹಾಗೂ ಕರ್ನಾಟಕ ರಾಜ್ಯದ ಪೊಲೀಸರು ಇಂತಹ ಆರೋಪ ನಿರಾಧಾರ ಎಂಬ ತೀರ್ಮಾನಕ್ಕೆ ಬಂದಿದ್ದರು. ಲವ್ ಜಿಹಾದ್ ಎಂಬುದು ಸಮಾಜದಲ್ಲಿ ಧಾರ್ಮಿಕ ಧ್ರುವೀಕರಣ ನಡೆಸಲು ಬಲಪಂಥೀಯ ಹಿಂದುತ್ವ ಶಕ್ತಿಗಳು ಪ್ರಾರಂಭಿಸಿದ ಭೀಕರ ಹಾಗೂ ದುರಾಲೋಚನೆಯ ಪರಿಣಾಮಗಳಿಂದ ನಡೆಸಿದ ಕೆಡುಕಿನ ಅಭಿಯಾನವಾಗಿದೆ ಎಂದು ಎನ್ಐಎ ತನಿಖೆಯು ಧೃಡಪಡಿಸಿದೆ. ಕೆಲವು ಮಾಧ್ಯಮಗಳು ಕೂಡಾ ಲವ್ ಜಿಹಾದ್ ಎಂಬ ಕಟ್ಟುಕಥೆ ಸೃಷ್ಟಿಸುವಲ್ಲಿ ಮತ್ತು ಆ ಮೂಲಕ ಮುಸ್ಲಿಂ ಸಮುದಾಯ ಮತ್ತು ಸಂಘಟನೆಗಳಿಗೆ ಕೆಟ್ಟ ಹೆಸರು ತರಲು ಪ್ರಯತ್ನಿದ್ದವು. ಆ ಮಾಧ್ಯಮಗಳೇ ಇದರ ಸಂಪೂರ್ಣ ಹೊಣೆಯನ್ನು ಹೊರಬೇಕಾಗಿದೆ. ಒಬ್ಬ ವ್ಯಕ್ತಿಗೆ ದೇಶದ ಸಂವಿಧಾನವು ನೀಡಿದ ವೈಯಕ್ತಿಕ ಹಕ್ಕುಗಳನ್ನು ದಮನಿಸುವ ಪ್ರಯತ್ನವೂ ಈ ಪ್ರಕರಣದ ಮೂಲಕ ನಡೆದಿದೆ. ಡಾ. ಹಾದಿಯಾ ಈ ಪ್ರಕರಣದ ಬಲಿಪಶುವಾಗಿದ್ದಾರೆ. ಮುಸ್ಲಿಂ ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು ಡಾ. ಹಾದಿಯಾರಿಗೆ ನ್ಯಾಯ ಮತ್ತು ಸ್ವಾತಂತ್ರ್ಯ ದೊರಕಿಸಿ ಕೊಡಲು ನಡೆಸಿದ ವಿಶೇಷ ಹಾಗೂ ನಿರಂತರ ಹೋರಾಟ ಇದಾಗಿದೆ. ಇದೀಗ ಎನ್ಐಎ ತನಿಖೆಯ ಅಂತ್ಯ ಎಲ್ಲರಿಗೂ ಪರಿಹಾರ ಒದಗಿಸಿದೆ.

ಎನ್ಐಎ ಸತ್ಯವನ್ನು ಹೊರ ತಂದಿದೆಯಾದರೂ ಡಾ. ಹಾದಿಯಾರವರ ಮೂಲಭೂತ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಅದರಲ್ಲೂ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿದ ಮುಸ್ಲಿಂ ಸಮುದಾಯ ಸೇರಿದಂತೆ ವ್ಯಕ್ತಿ ಹಾಗೂ ಸಂಘಟನೆಗಳಿಗೆ ಎನ್ಐಎ ತೀವ್ರ ತರಹದ ಹಾನಿಯನ್ನುಂಟು ಮಾಡಿದೆ ಎಂಬುದನ್ನು ಮರೆಯುವಂತಿಲ್ಲ.

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಹನ್ನೊಂದು ಪ್ರಕರಣಗಳ ತನಿಖೆ ನಡೆಸಿದ ಬಳಿಕವೂ ಲವ್ ಜಿಹಾದ್ ಬಗ್ಗೆ ಯಾವುದೇ ಬಲವಾದ ಹಾಗೂ ನಿರ್ಣಾಯಕ ಸಾಕ್ಷ್ಯಗಳು ಲಭಿಸಿಲ್ಲ ಎಂಬುವುದನ್ನು ಎನ್ಐಎ ಒಪ್ಪಿಕೊಳ್ಳಬೇಕಾಗಿದೆ. ಆದರೆ ದುರಾದೃಷ್ಟವಶಾತ್, ಸುಪ್ರೀಂ ಕೋರ್ಟ್‌ನಲ್ಲಿ ಎನ್ಐಎ ವಕೀಲರ ವಾದ ಇದಕ್ಕೆ ತದ್ವಿರುದ್ಧವಾಗಿದೆ. ಬಲಪಂಥೀಯ ಸಂಘಗಳು ಮತ್ತು ಹಾದಿಯಾ ಅವರ ತಂದೆ ಅಶೋಕನ್ ಅವರ ಅಪಪ್ರಚಾರದ ರೀತಿಯಲ್ಲೇ ಎನ್ಐಎಯ ಬಹುತೇಕ ನಿಲುವುಗಳು ಪ್ರಕಟಗೊಳ್ಳುತ್ತಿದ್ದವು. ಮುಸ್ಲಿಂ ಸಮುದಾಯದ ಬಗ್ಗೆ ಸಾಕಷ್ಟು ಅಪಪ್ರಚಾರಕ್ಕೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಎನ್ಐಎ ಹಸ್ತಕ್ಷೇಪದಿಂದಾಗಿ ಹಾದಿಯಾರವರಿಗೆ ವಿಳಂಬ ನ್ಯಾಯ ದೊರಕಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಪಾರದರ್ಶಕತೆಯ ಕೊರತೆ ಮತ್ತು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿಗಳು ಸಲ್ಲಿಕೆ ಮುಂತಾದ ಅಂಶಗಳು ಸಂಶಯಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದವು.

ಇದೀಗ ಕೊನೆಗೂ ಎನ್ಐಎ ಸತ್ಯವನ್ನು ಹೊರ ತಂದಿದೆ. ಈ ಹಿನ್ನೆಲೆಯಲ್ಲಿ ತನಿಖಾ ಏಜೆನ್ಸಿಗಳು ಗಂಭೀರ ಆತ್ಮಾವಲೋಕನ ಮಾಡಿಕೊಳ್ಳುತ್ತವೆ ಎಂದು ನಾವು ಭಾವಿಸುತ್ತೇವೆ. ವಿಭಜಕ ಮತ್ತು ಮತಾಂಧ ಶಕ್ತಿಗಳ ಪ್ರಚಾರಕ್ಕಾಗಿ ಎನ್ಐಎ ತನ್ನ ನಿಲುವುಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದೂ ನಾವು ನಂಬಿದ್ದೇವೆ. ಈ ಸತ್ಯದ ಬೆಳಕಿನಲ್ಲಿ ಭವಿಷ್ಯದಲ್ಲಿಯೂ ದುರುದ್ದೇಶಪೂರಿತ ಅಪಪ್ರಚಾರಗಳ ಬಗ್ಗೆ ಮಾಧ್ಯಮಗಳು, ಆಡಳಿತ ವರ್ಗ ಮತ್ತು ದೇಶದ ಪ್ರಜೆಗಳು ಎಚ್ಚರಿಕೆಯಿಂದ ಇರಬೇಕೆಂದು ನಾವು ಕರೆ ನೀಡುತ್ತಿದ್ದೇವೆ. ಇಂತಹ ಅಪಪ್ರಚಾರಗಳು ದೇಶವನ್ನು ಕೋಮು ಧ್ರುವೀಕರಣಗೊಳಿಸಲು ಮತ್ತು ರಾಜಕೀಯ ಲಾಭಕ್ಕಾಗಿ ಧರ್ಮಗಳ ಮಧ್ಯೆ ದ್ವೇಷ ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.