ಡಾ. ಸಿದ್ಧಲಿಂಗ ಸ್ವಾಮೀಜಿಯ ನಿಧನ: ದಮನಿತ ವರ್ಗಕ್ಕೆ ತುಂಬಲಾರದ ನಷ್ಟ ಪಾಪ್ಯುಲರ್ ಫ್ರಂಟ್

Thu, 10/25/2018 - 08:49 -- web editor

ಗದಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿಯ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಪ್ರತಿನಿಧಿಸುವ ಹೋರಾಟ ವಿಚಾರಧಾರೆಯ ಸಂಗಾತಿಯಂತಿದ್ದ ತೋಂಟದಾರ್ಯ ಸ್ವಾಮೀಜಿಯವರು; ತನ್ನ ನಡೆ ನುಡಿಯಿಂದಾಗಿ ಸಮಾಜದಲ್ಲಿ ಪ್ರಗತಿಪರ ಸ್ವಾಮೀಜಿ ಎಂದು ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ನಮ್ಮ ನಾಡು ಓರ್ವ ನಿರ್ಭೀತ ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ.

ದೇಶದಲ್ಲಿ ಪ್ರಸಕ್ತ ನಡೆಯುತ್ತಿರುವ ಅಸಹಜ ವಿದ್ಯಮಾನಗಳ ನಡುವೆ ಡಾ. ಸಿದ್ಧಲಿಂಗ ಸ್ವಾಮೀಜಿಯು ತಳೆದಿದ್ದ ನಿಲುವುಗಳು ಮಾನವ ಹಕ್ಕು ಹೋರಾಟಗಾರರಿಗೆ ಸ್ಫೂರ್ತಿದಾಯಕವಾಗಿದ್ದವು. ಮುಖ್ಯವಾಗಿ ಧಾರ್ಮಿಕ ಅಸಹಿಷ್ಣುತೆಯ ವಿರುದ್ಧ ಸ್ವಾಮೀಜಿ ಸಾರಿದ್ದ ಸಮರವು ವಾಸ್ತವದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಅವರು ನೀಡಿದ ಬಹುದೊಡ್ಡ ಕೊಡುಗೆ. ಅವರ ಸರ್ವಧರ್ಮ ಸಹಿಷ್ಣುತೆಯ ಮಹಾಕಾರ್ಯಕ್ಕೆ 'ರಾಷ್ಟ್ರೀಯ ಕೋಮು ಸೌಹಾರ್ದತಾ ಪ್ರಶಸ್ತಿ' ಪ್ರಾಪ್ತವಾಗಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗಿದೆ.

ಅಪಾರ ಭಕ್ತವೃಂದ, ಅಭಿಮಾನಿಗಳನ್ನು ಹೊಂದಿದ್ದರೂ ಅವರೆಲ್ಲರನ್ನೂ ಅಂಧಭಕ್ತರನ್ನಾಗಿಸದೆ ವೈಚಾರಿಕವಾಗಿ ಮುನ್ನಡೆಸಿದ ರೀತಿಯು ವರ್ತಮಾನದ ನಾಯಕತ್ವಕ್ಕೆ ಒಂದು ಮಾದರಿ. ಭಕ್ತರನ್ನು ಮತೀಯ ಚೌಕಟ್ಟಿನಿಂದ ಮುಕ್ತಗೊಳಿಸಿ, ಜೀವಪರವಾದ ಅನ್ನ, ಅಕ್ಷರ, ಪುಸ್ತಕ, ಸಂಸ್ಕೃತಿ, ದಾಸೋಹ ಪರಂಪರೆಯ ಮೂಲಕ ಮಾನವೀಯತೆಯ ವಿಸ್ತಾರಕ್ಕೆ ತರಬೇತುಗೊಳಿಸಿರುವುದು ಸ್ವಾಮೀಜಿಯ ಹೆಗ್ಗಳಿಕೆ. ಸ್ವಾಮೀಜಿಯ ನಿಧನದೊಂದಿಗೆ ಅವರ ಹೋರಾಟಧಾರೆಗಳು ಸೊರಗದಂತೆ ನೋಡಿಕೊಳ್ಳುವುದು ಈ ಸಮಾಜದ ಜವಾಬ್ದಾರಿ ಎಂಬುದಾಗಿ ಪಾಪ್ಯುಲರ್ ಫ್ರಂಟ್ ಸ್ಮರಿಸುತ್ತದೆ ಎಂದು ಮುಹಮ್ಮದ್‌ ಸಾಕಿಬ್ ಹೇಳಿದ್ದಾರೆ.