ಲಲಿತಾ ನಾಯಕ್ ಬೆದರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿ : ಪಾಪ್ಯುಲರ್ ಫ್ರಂಟ್

Thu, 11/01/2018 - 11:48 -- web editor

ಪ್ರಗತಿಪರ ಚಿಂತಕಿ, ಮಾನವಹಕ್ಕು ಹೋರಾಟಗಾರ್ತಿ ಹಾಗೂ ಮಾಜಿ ಸಚಿವರೂ ಆಗಿರುವ ಬಿ.ಟಿ.ಲಲಿತ ನಾಯಕ್ ರವರಿಗೆ ಬೆದರಿಕೆಯ ಕರೆ ಬಂದಿರುವ ಪ್ರಕರಣವನ್ನು ರಾಜ್ಯ ಸರಕಾರವು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು ಹಾಗೂ ಅವರಿಗೆ ಸೂಕ್ತ ಭದ್ರತೆಯನ್ನು ಕಲ್ಪಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಒತ್ತಾಯಿಸಿದ್ದಾರೆ.

100ಕ್ಕೂ ಅಧಿಕ ಬಾರಿ ಒಂದೇ ಮೊಬೈಲ್ ಸಂಖ್ಯೆಯಿಂದ ಅನಾಮಧೇಯ ಕರೆ ಬಂದಿರುವ ಬಗ್ಗೆ ಲಲಿತಾ ನಾಯಕ್ ಅವರು ಸಂಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸ್ ಇಲಾಖೆಯ ಕ್ರಮವನ್ನು ಪಾಪ್ಯುಲರ್ ಫ್ರಂಟ್ ಖಂಡಿಸುತ್ತದೆ. ದೇಶಾದ್ಯಂತ ಪ್ರಗತಿಪರ ಹೋರಾಟಗಾರರು, ಚಿಂತಕರ ಮೇಲೆ ಆಕ್ರಮಣ ನಡೆಯುತ್ತಿದ್ದು, ಈಗಾಗಲೇ ಕಲ್ಬುರ್ಗಿ, ಗೌರಿ ಲಂಕೇಶ್ ರಂತಹ ಮಾನವಹಕ್ಕು ಹೋರಾಟಗಾರರು ಹತ್ಯೆಗೀಡಾಗಿದ್ದಾರೆ. ಆರೋಪಿಗಳ ಪತ್ತೆ ಕಾರ್ಯಾಚರಣೆಯು ನಡೆಯುತ್ತಿರುವ ಮಧ್ಯೆಯೇ ಪ್ರಕರಣ ಮರುಕಳಿಸುತ್ತಿರುವುದನ್ನು ಸರಕಾರವು ಗಂಭೀರವಾಗಿ ಪರಿಗಣಿಸಬೇಕು.

ರಾಜ್ಯದ ಖ್ಯಾತ ಸಂಶೋಧಕ ಎಂ.ಎಂ ಕಲಬುರ್ಗಿರವರನ್ನು 2015 ರ ಅಗಸ್ಟ್ 30 ರಂದು ಅವರ ಮನೆಯಲ್ಲಿಯೇ ಹಣೆಗೆ ಗುಂಡಿಟ್ಟು ಕೊಂದಿದ್ದರು. ಆ ನಂತರ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ. ಅನಂತ ಮೂರ್ತಿಯವರು ನಿಧನ ಹೊಂದಿದಾಗ ಫ್ಯಾಷಿಸ್ಟ್ ಶಕ್ತಿಗಳು ಬೀದಿಯಲ್ಲಿ ಪಟಾಕಿ ಸಿಡಿಸಿ ವಿಕೃತಿಯನ್ನು ಮೆರೆದಿದ್ದರು. 2017 ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ರನ್ನು ಗುಂಡಿಟ್ಟು ಹತ್ಯೆಗೈದಿದ್ದರು. ಗಿರೀಶ್ ಕಾರ್ನಾಡ್, ಯೋಗೀಶ್ ಮಾಸ್ಟರ್, ಎಸ್. ಭಗವಾನ್, ಭಾಸ್ಕರ್ ಪ್ರಸಾದ್, ಪ್ರಕಾಶ್ ರೈ ಮೊದಲಾದ ಕಲಾವಿದರಿಗೂ, ಪ್ರಗತಿಪರ ಚಿಂತಕರಿಗೆ ನಿರಂತರ ಬೆದರಿಕೆ ಕರೆಗಳು ಬಂದಿದ್ದವು.

ಮಾನವಹಕ್ಕು ಹೋರಾಟಗಾರರನ್ನು ಹತ್ಯೆಗೈಯ್ಯುವ ನಿಗೂಢ ಸಂಚಿನಲ್ಲಿ ಭಾಗಿಯಾಗಿರುವ ಬಹಳಷ್ಟು ಮಂದಿ ಆರೋಪಿಗಳು ಸನಾತನ ಸಂಸ್ಥೆಯೊಂದಿಗೆ ಸಂಬಂಧವುಳ್ಳವರೆಂದು ವಿಶೇಷ ತನಿಖಾ ತಂಡ (SIT) ತಿಳಿಸಿದೆ. ಇದೀಗ ಹಿರಿಯ ಹೋರಾಟಗಾರ್ತಿ ಲಲಿತಾ ನಾಯಕ್ ರವರಿಗೂ ಬೆದರಿಕೆ ಕರೆ ಬಂದಿರುವ ಪ್ರಕರಣವು ಲಘುವಾಗಿ ಪರಿಗಣಿಸುವಂಥದ್ದಲ್ಲ. ನಾಡಿನ ಪ್ರಗತಿಪರ ಚಿಂತಕರನ್ನು ಉಳಿಸಿಕೊಳ್ಳುವ ಮತ್ತು ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವುದು ಆಡಳಿತ ವ್ಯವಸ್ಥೆಯ ಜವಾಬ್ಧಾರಿಯಾಗಿದೆ.

ಆದ್ದರಿಂದ ಮತ್ತೊಮ್ಮೆ ಕೊಲೆಗಡುಕರು ರಾಜ್ಯದಲ್ಲಿ ವಿಜೃಂಭಿಸದಂತೆ ನೋಡಿಕೊಳ್ಳುವುದು ಮತ್ತು ಬೆದರಿಕೆಗೆ ಒಳಗಾದ ವ್ಯಕ್ತಿಗಳಿಗೆ ನಿರ್ಲಕ್ಷ ತೋರದೇ ಸೂಕ್ತ ರಕ್ಷಣೆಯನ್ನು ಒದಗಿಸ ಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಒತ್ತಾಯಿಸಿದ್ದಾರೆ.

ಮಾಧ್ಯಮ ಸಂಯೋಜಕರು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಕರ್ನಾಟಕ