ಕಾಂಗ್ರೆಸ್ ಹತಾಶಗೊಂಡು ಗಲಭೆಗೆ ಪ್ರಚೋದನೆ ನೀಡುತ್ತಿದೆ -ಎಸ್‍ಡಿಪಿಐ ಆರೋಪ

Wed, 06/03/2015 - 12:02 -- web editor

ಮಂಗಳೂರು: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳ ಸ್ಪರ್ಧೆಯಿಂದ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್ ಹತಾಶಗೊಂಡು ಗಲಭೆಗೆ ಪ್ರಚೋದನೆ ನೀಡುತ್ತಿದೆ ಎಂದು ಎಸ್‍ಡಿಪಿಐ ಆರೋಪಿಸಿದೆ.

ಪಕ್ಷದ ದ.ಕ. ಜಿಲ್ಲಾ ಉಪಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ ಸೋಮವಾರ ಮಂಗಳೂರಿನಲ್ಲಿ ಕರೆದ ಮಾತನಾಡಿ, ಪುತ್ತೂರಿನ ಅರಿಯಡ್ಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೀತಿ ಸಂಹಿತೆ ಉಲ್ಲಂಘಿಸಿರುವುದರ ಬಗ್ಗೆ ಎಸ್‍ಡಿಪಿಐ ಕಾರ್ಯಕರ್ತರು ಅಧಿಕಾರಿಗಳಿಗೆ ದೂರು ನೀಡಿರುವುದನ್ನೇ ನೆಪ ಮಾಡಿ ಕಾಂಗ್ರೆಸ್ ಕಾರ್ಯಕರ್ತರು ಎಸ್‍ಡಿಪಿಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿದರು.

ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಒಂದು ಕುಟುಂಬದ ಸದಸ್ಯರ ಮಧ್ಯೆ ಈ ಹಿಂದೆಯೇ ಇದ್ದ ಕೌಟುಂಬಿಕ ಕಲಹದ ಲಾಭವನ್ನು ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರನ್ನು ಛೂ ಬಿಟ್ಟು ಪರಸ್ಪರ ಸಹೋದರರ ನಡುವೆಯೇ ಹಲ್ಲೆಗೆ ಪ್ರೇರಣೆ ನೀಡಿದೆ. ಇದನ್ನೇ ರಾಜಕೀಯ ಘರ್ಷಣೆ ಎಂಬ ರೀತಿಯಲ್ಲಿ ಚಿತ್ರೀಕರಿಸಿ ಎಸ್‍ಡಿಪಿಐ ನಾಯಕರ ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ದೂರನ್ನು ನೀಡಲಾಗಿದೆ ಎಂದವರು ಆರೋಪ ಮಾಡಿದರು.

ಜೋಕಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಯ ನಾಮಪತ್ರವನ್ನು ಅಧಿಕಾರಿಗಳ ಮೇಲೆ ಒತ್ತಡ ತಂದು ತಿರಸ್ಕøತಗೊಳ್ಳುವಂತೆ ಮಾಡಿದ್ದು, ಅನಂತರ ಪಕ್ಷವು ನ್ಯಾಯಾಲಯದ ಮೊರೆ ಹೋದಾಗ ನಾಮಪತ್ರ ಸ್ವೀಕೃತವಾಯಿತು ಎಂದು ವಿವರಿಸಿದ ಅತಾವುಲ್ಲಾ, ಕಾಂಗ್ರೆಸ್‍ನ ದ್ವೇಷಪೂರಿತ ರಾಜಕೀಯಕ್ಕೆ ಇದೊಂದು ಉದಾಹರಣೆಯಾಗಿದೆ ಎಂದರು.
ಇದೀಗ ಜೂನ್ 5ರಂದು ಹೊರಬೀಳಲಿರುವ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶದ ದಿನದಂದೂ ಕಾಂಗ್ರೆಸ್ ತನ್ನ ಚಾಳಿಯನ್ನು ಮುಂದುವರಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಹಾಗೂ ಪೋಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಲ್ಫೋನ್ಸೊ ಫ್ರಾಂಕೊ, ರಾಜ್ಯ ಸಮಿತಿ ಸದಸ್ಯ ಎಂ.ಕೂಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವಾರ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಬಜೆತ್ತೂರು ಹಾಗೂ ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕ ಉಪಸ್ಥಿತರಿದ್ದರು.