ಮ್ಯಾಗಿ ಉತ್ಪನ್ನ ತಕ್ಷಣ ನಿಷೇಧಿಸುವಂತೆ ಎಸ್.ಡಿ.ಪಿ.ಐ ಒತ್ತಾಯ

Wed, 06/03/2015 - 12:19 -- web editor

ಬೆಂಗಳೂರು: ಮ್ಯಾಗಿ ನೂಡಲ್ಸ್‌ನಲ್ಲಿ ಮನೋಸೋಡಿಯಂ ಗ್ಲುಟಮೇಟ್ ಹಾಗೂ ಸೀಸದ ಅಂಶ ಮಿತಿಗಿಂತ ಹೆಚ್ಚಿರುವುದನ್ನು ಉತ್ತರ ಪ್ರದೇಶದ ಎಫ್‌ಎಸ್‌ಡಿಎ ಪತ್ತೆ ಹಚ್ಚಿದ್ದು, ಅಪಾಯಕಾರಿ ರಾಸಾಯನಿಕ ಅಂಶವು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಕ್ಷಣವಾಗಿ ಮ್ಯಾಗಿ ಹಾಗೂ ಇನ್ನಿತರ ಅಪಾಯಕಾರಿ ರಾಸಾಯನಿಕವನ್ನು ಹೊಂದಿರುವ ಆಹಾರ ಉತ್ಪನ್ನಗಳನ್ನು ನಿಷೇಧಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕನಾಟಕ ರಾಜ್ಯ ಸಮಿತಿಯು ಒತ್ತಾಯಿಸಿದೆ.

ಮ್ಯಾಗಿಯು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವಂತಹ ಉತ್ಪನ್ನವಾಗಿದ್ದು, ಅದರಲ್ಲೂ ಮಕ್ಕಳು ಅತೀ ಹೆಚ್ಚಿನ ಪ್ರಮಾಣದ ಬಳಕೆದಾರರಾಗಿದ್ದಾರೆ. ಇದೀಗಾಗಲೇ ಹಲವು ಮಕ್ಕಳು ಮತ್ತು ಬಳಕೆದಾರರು ಇದರ ಪರಿಣಾಮದಿಂದ ಅನಾರೋಗ್ಯಕ್ಕೆ ತುತ್ತಾಗಿರಬಹುದೆಂಬ ಸಂಶಯಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಇದು ಬಳಕೆದಾರರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಡಾ ಮೆಹಬೂಬ್ ಶರೀಫ್ ಅವಾದ್ ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಪೆಪ್ಸಿ ಕೋಲಾದಲ್ಲಿ ವಿಷಕಾರಿ ಕೀಟನಾಶಕ ಪತ್ತೆಯಾಗಿರುವುದು ವರದಿಯಾಗಿದೆ. ಇಂತಹ ಎಲ್ಲಾ ಪಾನೀಯ ಮತ್ತು ಆಹಾರ ಉತ್ಪನ್ನಗಳನ್ನು ಪರೀಕ್ಷೆ ನಡೆಸಿ ಸಾರ್ವಜನಿಕ ಸುರಕ್ಷತೆ ಕಾಪಾಡುವುದು ಸರಕಾರದ ಕರ್ತವ್ಯವಾಗಿದೆ ಮತ್ತು ಅಪಾಯಕಾರಿ ಅಂಶಗಳು ಇಲ್ಲದಿರುವುದನ್ನು ದಢೀಕರಿಸಿ ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಎಸ್.ಡಿ.ಪಿ.ಐ ಒತ್ತಾಯಿಸಿದೆ. ಇದೀಗಾಗಲೇ ಕೇರಳ ರಾಜ್ಯದಲ್ಲಿ ನಿಷೇಧಿಸಿದಂತೆ ಕರ್ನಾಟಕ ರಾಜ್ಯದಲ್ಲೂ ಅದಕ್ಕೆ ನಿಷೇಧವನ್ನು ಹೇರಬೇಕು. ಮತ್ತು ಮ್ಯಾಗಿಯಂತಹ ಆಹಾರ ಪದಾರ್ಥಗಳಿಗೆ ಗುಣಮಟ್ಟ ದಢೀಕರಣ ನೀಡುವ ಆರ್ಗ್‌ಮಾರ್ಕ್ ಹಾಗೂ ಇನ್ನಿತರ ಸಂಸ್ಥೆಗಳ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಮತ್ತು ಇಂತಹ ಅಪಾಯಕಾರಿ ಉತ್ಪನ್ನಗಳಿಗೆ ರಾಜ್ಯದಲ್ಲಿ ಅವಕಾಶವನ್ನು ಕಲ್ಪಿಸಬಾರದೆಂದು ಮೆಹಬೂಬ್ ಶರೀಫ್ ಆಗ್ರಹಿಸಿದ್ದಾರೆ.