ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಲ ವೃದ್ಧಿಸಿಕೊಂಡ ಎಸ್.ಡಿ.ಪಿ.ಐ

Sun, 06/07/2015 - 09:44 -- web editor

ಬೆಂಗಳೂರು: ಕೆಲವೊಂದು ಪಂಚಾಯತ್‌ಗಳಲ್ಲಿ ಆಡಳಿತ ನಡೆಸಲು ಎಸ್.ಡಿ.ಪಿ.ಐ ಅಭ್ಯರ್ಥಿಗಳೇ ನಿರ್ಣಾಯಕರಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅಬ್ಬರದ ಪ್ರಚಾರ, ಹಣ ಬಲ, ಮದ್ಯ ಹಂಚಿಕೆ, ಅಪಪ್ರಚಾರಗಳ ನಡುವೆಯೂ ನಿಷ್ಠಾವಂತ ಕಾರ್ಯಕರ್ತರ ಹಗಳಿರುಲಿನ ಪರಿಶ್ರಮದಿಂದ ಎಸ್.ಡಿ.ಪಿ.ಐ ತನ್ನ ಅಸ್ತಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 272 ಸ್ಥಾನಗಳಿಗೆ ಸ್ಪರ್ಧಿಸಿ, 45 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಹಾಗೂ ಹಲವು ಸ್ಥಳಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ 31 ಸ್ಥಾನಗಳಿಗೆ ಸ್ಪರ್ಧಿಸಿ 4 ಸ್ಥಾನಗಳನ್ನು ಗಳಿಸಿ, ಕೆಲವು ಸ್ಥಳಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ. ಅದೇ ರೀತಿ ಕೊಡಗು ಜಿಲ್ಲೆಯಲ್ಲಿ 30 ಸ್ಥಾನಗಳಿಗೆ ಸ್ಪರ್ಧಿಸಿ 12 ಸ್ಥಾನಗಳಲ್ಲಿ ಯಶಸ್ಸು ಸಾಧಿಸಿ, ಒಂದು ದ್ವಿತೀಯ ಸ್ಥಾನವನ್ನು ಪಡೆದಿದೆ. ಮತ್ತು ಹಾಸನ ಜಿಲ್ಲೆಯಲ್ಲಿ 5 ಸ್ಥಾನಗಳಲ್ಲಿ ಸ್ಪರ್ಧಿಸಿ, 4 ಸ್ಥಾನವನ್ನು ಪಡೆದು, ಒಂದು ಸ್ಥಾನವು 2 ಮತಗಳ ಅಂತರದಿಂದ ಸ್ಥಾನವನ್ನು ಕಳೆದುಕೊಂಡಿದೆ.

ರಾಜ್ಯದ ಹೆಚ್ಚಿನ ಸ್ಥಳಗಳಲ್ಲಿ ಪಕ್ಷವು ನಗರ, ಪಟ್ಟಣ ಪ್ರದೇಶಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೆಶಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಜಿಪ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು 15 ಸ್ಥಾನಗಳಿದ್ದು, 7 ಸ್ಥಾನಗಳನ್ನು ಗಳಿಸಿದ ಎಸ್.ಡಿ.ಪಿ.ಐ ಅತೀ ಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿ ಹೊರ ಹೊಮ್ಮಿದೆ. ಈ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿಯ ಬೆಂಬಲಿತ ಅಭ್ಯರ್ಥಿಗಳು 6 ಸ್ಥಾನವನ್ನು ಗಳಿಸಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಹಾಗೂ ಆರ್ಕುಳ ಗ್ರಾಮ ಪಂಚಾಯತಿಯಲ್ಲಿ 6 ಸ್ಥಾನವನ್ನು ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. ಸವಣೂರು, ಬಜ್ಪೆ, ಸೂರಿಂಜೆಯಲ್ಲಿ ತಳಾ 4 ಸ್ಥಾನವನ್ನು ಪಡೆದಿದೆ. ಕೊಡಗು ಜಿಲ್ಲೆಯ ಸಿದ್ಧಾಪುರ ಗ್ರಾಮ ಪಂಚಾಯತ್‌ಯಲ್ಲಿ 5 ಸ್ಥಾನವನ್ನು ಪಡೆದಿದ್ದು, ಆಡಳಿತ ನಡೆಸಲು ಎಸ್.ಡಿ.ಪಿ.ಐ ನಿರ್ಣಾಯಕ ಪಾತ್ರ ವಹಿಸಲಿದೆ.

ಹಾಸನ ಜಿಲ್ಲೆಯ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ನೂರುಲ್ಲಾ, ಸೀಗೆ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೆಲವೇ ತಿಂಗಳ ಹಿಂದೆ ಪಕ್ಷದ ಕಾರ್ಯ ಚಟುವಟಿಕೆ ಪ್ರಾರಂಭಿಸಿದ ರಾಯಚೂರು ಜಿಲ್ಲೆಯ ಗುರುಗುಂಟ ಗ್ರಾಮ ಪಂಚಾಯತ್‌ನಲ್ಲಿ ಸಲೀಂ ಬಿಸ್ತ ರಾಯಚೂರಿನಲ್ಲಿ ಎಸ್.ಡಿ.ಪಿ.ಐ ಖಾತೆ ತೆರೆಯುವಲ್ಲಿ ಸಫಲರಾಗಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ತಿಳಿಸಿದ್ದಾರೆ.