ಕ್ರಿಯೇಟಿವ್ ಫೌಂಡೇಶನ್ ವತಿಯಿಂದ ವೆಬ್ಸೈಟ್ ಅನಾವರಣ, ಸನ್ಮಾನ ಕಾರ್ಯಕ್ರಮ

Wed, 08/19/2015 - 09:25 -- web editor

ಮಂಗಳೂರು : ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಸಂಸ್ಥೆಯ ವೆಬ್ಸೈಟ್ ಅನಾವರಣ ಹಾಗೂ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಜಮೀಯತುಲ್ ಫಲಾಹ್ ಕಮ್ಯೂನಿಟಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಸರಕಾರದ ಮತ್ತು ಸರಕಾರೇತರ ಸಂಸ್ಥೆಗಳಿಂದ ಸಿಗುವ ವಿದ್ಯಾರ್ಥಿ ವೇತನ ಹಾಗೂ ಶೈಕ್ಷಣಿಕ ಸಾಲದ ಬಗ್ಗೆ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ವ್ಯವಸ್ಥಾಪಕ ಅಬ್ದುಲ್ ಖಾದರ್ ಮಾಹಿತಿ ನೀಡಿದ್ದರು.

ಶೇಕಡಾ 90ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ 69 ಪ್ರೌಢಶಾಲೆಗಳಿಗೆ ಸನ್ಮಾನ ಹಮ್ಮಿಕೊಂಡಿದ್ದು ಈ ಪೈಕಿ 54 ಶಾಲೆಗಳ ಮುಖ್ಯೋಪಾಧ್ಯಾಯರು ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಇದರ ಉಪಾಧ್ಯಕ್ಷ ಮುಹಮ್ಮದ್ ಯು.ಬಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ಹಿಂಸೆ ಶಿಕ್ಷೆ ನೀಡದೆ ಬೋಧಿಸಬೇಕೆಂದು ಸರಕಾರ ಹೇಳುತ್ತದೆ. 9ನೇ ತರಗತಿ ಯವರೆಗೆ ವಿದ್ಯಾರ್ಥಿಗಳನ್ನು ಅನುತ್ತೀಣಗೊಳಿಸಬಾರದು ಎಂಬ ಆದೇಶವಿದೆ. ಪ್ರತೀ ವಿದ್ಯಾರ್ಥಿಗೂ ದೇಶದ ಉತ್ತಮ ಪ್ರಜೆಯಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಹೇಳಿದರು.

ವಾರ್ತಾಧಿಕಾರಿ ಖಾದರ್ ಶಾ, ಬಲ್ಮಠ ಯೇನಪೋಯಾ ಕಾಲೇಜಿನ ಪ್ರಾಂಶುಪಾಲ ಆರಿಫ್, ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲಾ ಅಧ್ಯಕ್ಷ ಹನೀಫ್ ಕಾಟಿಪಳ್ಳ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯೆ ಝೊಹರಾ ಅಬ್ಬಾಸ್, ನ್ಯಾಶನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ಆಸರೆ ವುಮೆನ್ಸ್ ಫೌಂಡೇಶನ್ನ ಅಧ್ಯಕ್ಷೆ ಮುಮ್ತಾಝ್, ಹೋಪ್ ಫೌಂಡೇಶನ್ನ ಸೈಫ್ ಸುಲ್ತಾನ್, ಹೈಲ್ಯಾಂಡ್ ಇಸ್ಲಾಮಿಕ್ ಫಾರಂನ ಅಧ್ಯಕ್ಷ ಮುಹಮ್ಮದ್ ರಿಝ್ವಾನ್ ಉಪಸ್ಥಿತರಿದ್ದರು.

ಅಹರಾಝ್ ಕಲ್ಲಡ್ಕ ಸ್ವಾಗತಿಸಿದರು. ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.