ಯುವಕನ ಮೇಲೆ ಅನೈತಿಕ ಗೂಂಡಾಗಿರಿ: ಆರೋಪಿಗಳು ಬಜರಂಗದಳ, ವಿಎಚ್‌ಪಿ ಕಾರ್ಯಕರ್ತರು: ಪೊಲೀಸ್ ಆಯುಕ್ತ ಎಸ್.ಮುರುಗನ್

Fri, 08/28/2015 - 09:58 -- web editor

ಮಂಗಳೂರು: ಅತ್ತಾವರದ ಕೆಎಂಸಿ ಬಳಿ ಯುವಕನೊಬ್ಬನನ್ನು ತಂಡವೊಂದು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಪೈಕಿ ಹೆಚ್ಚಿನವರು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ಸ್ಪಷ್ಟಪಡಿಸಿದ್ದಾರೆ.

ಕಮಿಷನರ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಕರಣದಲ್ಲಿ ಈವರೆಗೆ 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲರಿಗೂ ಸೆಪ್ಟಂಬರ್ 7ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದರು. ನ್ಯಾಯಾಲಯದ ಆದೇಶದ ಪ್ರಕಾರ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ ಎಂದು ಮುರುಗನ್ ಹೇಳಿದರು.
ಯುವತಿ ಪಾಂಡೇಶ್ವರ ಪೊಲೀಸ್ ಠಾಣೆಗೆ ತಡವಾಗಿ ದೂರು ನೀಡಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿದ್ದೇವೆ. ಹಲ್ಲೆಗೊಳಗಾದ ಆರೋಪಿಯೂ ದೂರು ನೀಡಿದ್ದು, ಎರಡೂ ದೂರಿನ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಘಟನೆಯ ಬಗ್ಗೆ ವಾಟ್ಸ್‌ಆ್ಯಪ್, ಫೇಸ್‌ಬುಕ್ ಸಹಿತ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊ ಹಾಗೂ ಭಾವಚಿತ್ರಗಳಲ್ಲಿ ದೊರೆತ ಮಾಹಿತಿ, ದೂರವಾಣಿ ಕರೆ, ಸಿಸಿಟಿವಿ ಸಹಿತ ಇನ್ನಿತರ ಸಾಕ್ಷಾಧಾರಗಳನ್ನು ಸಂಗ್ರಹಿಸಲಾಗಿದ್ದು, ಪ್ರಕರಣದ ಸತ್ಯಾಂಶವನ್ನು ಭೇದಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಆಗಸ್ಟ್ 24ರಂದು ಶಾಕಿರ್ ತಾನು ಕೆಲಸ ಮಾಡುತ್ತಿದ್ದ ಮಾಲ್‌ನಿಂದ ಸಂಜೆ 5:27ಕ್ಕೆ ಹೊರಗೆ ಬಂದಿದ್ದಾನೆ. 5:34ಕ್ಕೆ ಯುವತಿ ಹೊರಗೆ ಬಂದಿದ್ದಾಳೆ. ಇವರ ನಡುವೆ ಸಂಭಾಷಣೆ ನಡೆದಿದೆ ಎಂದು ಅವರು ತಿಳಿಸಿದರು.
5:47ಕ್ಕೆ ಯುವಕ ಮತ್ತು ಯುವತಿ ಭೇಟಿ ಮಾಡಿದ್ದಾರೆ. ಅನಂತರ ಕಾರು ಮುಂದಕ್ಕೆ ಚಲಿಸಿದೆ. 5:52ರಿಂದ ಆರೋಪಿಗಳು ಯುವಕನನ್ನು ಎಳೆದಾಡಿದ್ದಾರೆ ಎಂದು ಮುರುಗನ್ ಸಿಸಿಟಿವಿಯನ್ನು ಉಲ್ಲೇಖಿಸಿ ಹೇಳಿದರು. ಅಲ್ಲದೆ, 6:10ರೊಳಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಅಲ್ಲಿನ ಜನರನ್ನು ಚದುರಿಸಿ ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಮಾರು 10ರಿಂದ 15 ನಿಮಿಷಗಳ ಕಾಲ ಆರೋಪಿಗಳು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ವಿವರಿಸಿದರು.

ಆರೋಪಿಗಳು ಯುವಕನನ್ನು ಕಟ್ಟಿಹಾಕಿ ಆತನ ಮೈಮೇಲಿದ್ದ ಶರ್ಟ್, ಪ್ಯಾಂಟ್‌ನ್ನು ಕಳಚಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ್ದನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಿಗೆ ರವಾನೆ ಮಾಡಿದ್ದಾರೆ. ಪ್ರಸ್ತುತ ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಪಾಂಡೇಶ್ವರ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಯುವಕನ ರಕ್ಷಣೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಇಂತಹ ಪ್ರಕರಣಗಳು ಸಮಾಜದಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದ್ದು, ಸಮಾಜಕ್ಕೆ ಕಳಂಕವಾಗಿದೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವವರ ಬಗ್ಗೆ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರಗಿಸುವುದಾಗಿ ಎಚ್ಚರಿಕೆ ನೀಡಿದ ಆಯುಕ್ತರು, ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕರು ಕೂಡಾ ಪೊಲೀಸರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

http://vbnewsonline.com/Karavali/196165/