ಪ್ರತಿಪಕ್ಷ ನಾಯಕ ಉದಯ ಶಂಕರ್‌ರನ್ನು ಸೋಲಿಸಿದ ಎಸ್‌ಡಿಪಿಐನ ಮುಜಾಹಿದ್ ಪಾಶಾ

Fri, 08/28/2015 - 10:07 -- web editor

ಬೆಂಗಳೂರು: ಬಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ‘ಭ್ರಷ್ಟಾಚಾರ ಮುಕ್ತ, ಜನಪರ ಕಾರ್ಪೊರೇಟರ್’ ಎಂಬ ಧ್ಯೇಯವಾಕ್ಯದೊಂದಿಗೆ ಸ್ಪರ್ಧೆಗಿಳಿದ ಎಸ್‌ಡಿಪಿಐ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸಿದ್ದಾಪುರ ವಾರ್ಡ್ 144ರ ಅಭ್ಯರ್ಥಿ ಮುಜಾಹಿದ್ ಪಾಶಾ ಕಳೆದ ಸಾಲಿನ ಕಾಂಗ್ರೆಸ್‌ನ ಬಿಬಿಎಂಪಿ ಪ್ರತಿಪಕ್ಷ ನಾಯಕರಾಗಿದ್ದ ಉದಯ ಶಂಕರ್‌ರನ್ನು ಸೋಲಿಸಿ ಜಯಭೇರಿ ಬಾರಿಸಿದ್ದಾರೆ.

ಬಿಎಸ್ಸಿ ಪದವೀಧರರಾದ ಮುಜಾಹಿದ್ ಪಾಶಾ, ಸಮಾಜ ಸೇವೆಯ ಮೂಲಕ ಚಿರಪರಿಚಿತರಾಗಿದ್ದರು. ಸರ್ವರೊಂದಿಗೂ ಉತ್ತಮ ಬಾಂಧವ್ಯ ಹಾಗೂ ಗುಣ ನಡತೆಯ ಮೂಲಕ ವಾರ್ಡ್‌ನ ಜನಸಮಾನ್ಯರ ಮನ ಗೆದ್ದಿದ್ದರು. ಮೂಲಭೂತ ಹಕ್ಕುಗಳಾದ ಆರೋಗ್ಯ ಕಾರ್ಡ್, ಆಧಾರ ಕಾರ್ಡ್ ಮತ್ತು ಪಡಿತರ ಚೀಟಿಯ ಬಗ್ಗೆ ಅತೀವ ಕಾಳಜಿ ವಹಿಸಿ ಕೆಲಸ ನಿರ್ವಹಿಸಿದ್ದರು. ಆರ್‌ಟಿಇ ಬಗ್ಗೆ ಅಭಿಯಾನ ನಡೆಸಿ ನೂರಾರು ಬಡ ಮಕ್ಕಳನ್ನು ಉತ್ತಮ ಶಾಲೆಗಳಿಗೆ ದಾಖಲಿಸಿದ್ದರು. ಜನಪರ ಹಕ್ಕುಗಳಿಗೆ ಮತ್ತು ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದ್ದರು. ಶೋಷಿತ, ದಮನಿತ, ಅಲ್ಪಸಂಖ್ಯಾತರ ಪರ ಧ್ವನಿಯಾಗಿದ್ದುದೇ ಗೆಲುವಿಗೆ ಮುಖ್ಯ ಕಾರಣವಾಗಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಮುಜಾಹಿದ್, ವಾರ್ಡ್‌ನ ಸರ್ವತೋಮುಖ ಅಭಿವದ್ಧಿಗಾಗಿ ಚುನಾಯಿಸಿದ ಪ್ರತಿಯೊಬ್ಬ ಮತದಾರರಿಗೂ ಕತಜ್ಞತೆಯನ್ನು ಸಲ್ಲಿಸಿದ್ದಾರೆ. ಶಿಕ್ಷಣ, ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಸಮರ್ಪಕ ರಸ್ತೆ, ಕಸ ವಿಲೇವಾರಿಯ ಸಮಸ್ಯೆಗಳನ್ನು ನಿವಾರಿಸಲು ಸದಾ ಕಾಳಜಿ ವಹಿಸಿ ಕಾರ್ಯ ನಿರ್ವಹಿಸುವೆ ಎಂದು ಹೇಳಿದ್ದಾರೆ.