ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಗೆ ತೊಡಕು: ಕ್ಯಾಂಪಸ್ ಫ್ರಂಟ್‌ನಿಂದ ಪ್ರತಿಭಟನಾ ರಾಲಿ

Sat, 08/29/2015 - 09:13 -- web editor

ಮಂಗಳೂರು: ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ಸರ್ವರ್ ದೋಷದ ಕಾರಣ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಅರ್ಜಿಯನ್ನು ಸಲ್ಲಿಸಲು ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ನಗರದ ಪಿವಿಎಸ್ ಸರ್ಕಲ್‌ನಿಂದ ಲಾಲ್‌ಭಾಗ್‌ನಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಕಚೇರಿಯ ವರೆಗೆ ಪ್ರತಿಭಟನಾ ರಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬಳಿಕ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಕಚೇರಿಗೆ ಬೀಗ ಜಡಿದು ಧರಣಿ ನಡೆಸಲಾಯಿತು. ಧರಣಿಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತುಫೈಲ್, ಕೇಂದ್ರ ಸರಕಾರ ಡಿಜಿಟಲ್ ಇಂಡಿಯಾದ ಚಿಂತನೆಯನ್ನು ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡುತ್ತಿದೆ. ಕಳೆದ ವರ್ಷ 1 ಕೋಟಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದರೆ, ಈ ವರ್ಷದಲ್ಲಿ ಕೇವಲ 4. 5 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಮುಂದೆ ಹಂತಹಂತವಾಗಿ ವಿದ್ಯಾರ್ಥಿವೇತನವನ್ನು ಕಡಿತ ಗೊಳಿಸುವ ತಂತ್ರ ಇದಾಗಿದೆ. ಇನ್ನು ಅರ್ಜಿ ಸಲ್ಲಿಕೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿಯಿದೆ. ಸರ್ವರ್‌ನಲ್ಲಿರುವ ದೋಷವನ್ನು ಸರಿಪಡಿಸದಿದ್ದರೆ 85 ಶೇ.ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗದೆ ಅವರ ಶಿಕ್ಷಣಕ್ಕೆ ಸಮಸ್ಯೆಯಾಗಲಿದೆ ಎಂದು ಹೇಳಿದರು .

ಧರಣಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ತಪ್ಸಿರ್, ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಶಾಕಿರ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇರ್ಷಾದ್ ಬಜ್ಪೆ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಝ್ ಮಂಜನಾಡಿ, ಉಡುಪಿ ಜಿಲ್ಲಾಧ್ಯಕ್ಷ ಶಫೀಕ್, ಬಂಟ್ವಾಳ ತಾಲೂಕು ಅಧ್ಯಕ್ಷ ನಬೀಲ್ ಅಹ್ಮದ್, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಆಕಿಬ್ ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರ ಬೇಡಿಕೆಯಂತೆ ಸ್ಥಳಕ್ಕೆ ಆಗಮಿಸಿದ ಪ್ರಭಾರ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಉಸ್ಮಾನ್ ಎ., ಪೋರ್ಟಲ್‌ನಲ್ಲಿನ ಸರ್ವರ್‌ನಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ಈಗಾಗಲೇ ಇಲಾಖೆಯ ಗಮನಕ್ಕೆ ತರಲಾಗಿದ್ದು, ಮತ್ತೊಮ್ಮೆ ಈ ಬಗ್ಗೆ ಮನವರಿಕೆ ಮಾಡಲಾಗುವುದೆಂದು ತಿಳಿಸಿದರು. ಅಲ್ಲದೆ, ಧರಣಿ ಸ್ಥಳಕ್ಕೆ ಆಗಮಿಸಿದ ವಿಧಾನಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯ ಅಧ್ಯಕ್ಷ ಶಾಸಕ ಜೆ.ಆರ್. ಲೋಬೊ, ಧರಣಿ ನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಕೆಗೆ ಸರ್ವರ್‌ನಲ್ಲಿ ಆಗಿರುವ ದೋಷದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆಗೆ ಮತ್ತಷ್ಟು ಕಾಲಾವಕಾಶ ನೀಡುವ ಬಗ್ಗೆ ಅಲ್ಪಸಂಖ್ಯಾತ ಇಲಾಖೆಯ ನಿರ್ದೇಶಕರೊಂದಿಗೆ ಮಾತುಕತೆ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.