ದಲಿತ ಮಹಿಳೆಯ ನಗ್ನಗೊಳಿಸಿ, ಮೂತ್ರ ಕುಡಿಸಿದ ದುಷ್ಕರ್ಮಿಗಳು

Fri, 09/04/2015 - 13:52 -- web editor

ಭೋಪಾಲ್: ಸರಕಾರ ನೀಡಿದ ಜಮೀನಿನಲ್ಲಿ ಕೃಷಿ ಮಾಡಿದುದನ್ನು ಹಾಳುಗೆಡವಲು ಬಂದ ಮೇಲ್ಜಾತಿಯ ಜನರನ್ನು ವಿರೋಧಿಸಿದ ದಲಿತ ಮಹಿಳೆಯೊಬ್ಬಳನ್ನು ನಗ್ನಗೊಳಿಸಿದುದೇ ಅಲ್ಲದೆ, ಆಕೆಗೆ ಬಲವಂತವಾಗಿ ಮೂತ್ರ ಕುಡಿಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಮಧ್ಯಪ್ರದೇಶದ ಛತ್ತಾಪುರ್ ಜಿಲ್ಲೆಯ ನೌಗಾಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ವಾರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇಲ್ಲಿನ ಸರಕಾರಿ ಭೂಮಿಯೊಂದರ ಭಾಗವೊಂದನ್ನು 45ರ ಹರೆಯದ ದಲಿತ ಮಹಿಳೆಗೆ ಸರಕಾರ ನೀಡಿತ್ತು. ಇದೀಗ ದಲಿತ ಮಹಿಳೆಗೆ ಪಟ್ಟಾ ಭೂಮಿಯಾಗಿರುವ ಭೂಮಿ ಈ ಹಿಂದೆ ಇಲ್ಲಿನ ಮೇಲ್ಜಾತಿಗೆ ಸೇರಿದ ವಿಜಯ್ ಯಾದವ್ ಎಂಬಾತನಿಗೆ ಸೇರಿದ್ದಾಗಿತ್ತೆನ್ನಲಾಗಿದೆ. ಭೂಮಿ ದಲಿತ ಮಹಿಳೆಯ ಕುಟುಂಬದ ಪಾಲಾದ ನಂತರ ವಿಜಯ್ ಗೆ ಆಕೆಯ ಮೇಲೆ ದ್ವೇಷವುಂಟಾಗಿತ್ತು. ಹೀಗಾಗಿ ಆತ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದ. ಕಳೆದ ಕೆಲವು ದಿನಗಳ ಹಿಂದೆ ವಿಜಯ್, ದಲಿತ ಮಹಿಳೆಯ ಕೃಷಿಗೆ ತನ್ನ ದನಗಳನ್ನು ಬಿಟ್ಟು ಕೃಷಿ ನಾಶಕ್ಕೆ ಯತ್ನಿಸಿದ್ದ. ಈ ಬಗ್ಗೆ ವಿಜಯ್ ಮನೆಗೆ ದೂರು ನೀಡಲು ದಲಿತ ಮಹಿಳೆ ಹೋದಾಗ ಆತನ ಪತ್ನಿ ವಿಮಲಾ ಯಾದವ್, ದಲಿತ ಮಹಿಳೆಗೆ ಲಾಠಿಯಿಂದ ಹಲ್ಲೆ ನಡೆಸಿದ್ದಳು. ಅದಾದ ಕೆಲವು ಸಮಯದ ನಂತರ ವಿಜಯ್ ಕೂಡ ಆಗಮಿಸಿ, ದಲಿತ ಮಹಿಳೆಯನ್ನು ನಗ್ನಗೊಳಿಸಿದ್ದಾನೆ ಮತ್ತು ತನ್ನ ಮೂತ್ರವನ್ನು ಆಕೆಗೆ ಬಲವಂತವಾಗಿ ಕುಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸ್ ದೂರು ನೀಡಿದರೆ, ಇದಕ್ಕೂ ಹೆಚ್ಚಿನ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ಆತ ದಲಿತ ಮಹಿಳೆಗೆ ಬೆದರಿಕೆಯನ್ನೊಡ್ಡಿದ್ದಾನೆ ಎಂದು ತಿಳಿದುಬಂದಿದೆ.

ಆದಾಗ್ಯೂ, ಮಹಿಳೆಯು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಆರೋಪಿಯ ವಿರುದ್ಧ ಐಪಿಸಿ ಕಲಂಗಳಾದ 394, 323, 506 ಮತ್ತು 34 ಹಾಗೂ ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ. ಹೀಗಿದ್ದರೂ ಸ್ಥಳೀಯ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲವೆಂದು, ದಲಿತರ ಗುಂಪೊಂದು ಛತ್ತಾಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ದಂಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತುಕೊಂಡು ಕ್ರಮಕೈಗೊಳ್ಳವಂತೆ ಕಿರಿಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಲಿತ್ ಶಾಕ್ಯವರ್ ಹೇಳಿದ್ದಾರೆ. ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ವಿಜಯ್ ದಂಪತಿ ಗ್ರಾಮದಿಂದ ತಲೆ ಮರೆಸಿಕೊಂಡಿದ್ದಾರೆ.

http://www.newskannada.in/breaking-latest/dalit-woman-stripped-naked-and...