ಬಾಬಾ ಬುಡನ್ ಗಿರಿ ವಿವಾದವನ್ನು ರಾಜ್ಯ ಸರಕಾರವೇ ಬಗೆಹರಿಸಲಿ: ಸುಪ್ರೀಂ ಕೋರ್ಟ್

Fri, 09/04/2015 - 14:11 -- web editor

ನವದೆಹಲಿ: ಬಾಬಾ ಬುಡನ್ ಗಿರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪೋಂದನ್ನು ನೀಡಿದ್ದು, ವಿವಾದಿತ ದರ್ಗಾ ಕ್ಕೆ ಸಂಬಂಧಿಸಿದ ಒಡೆತನದ ಪ್ರಶ್ನೆಯನ್ನು ರಾಜ್ಯ ಸರಕಾರವೇ ಬಗೆಹರಿಸಬೇಕು ಎಂದು ಆದೇಶಿದೆ.

ಎನ್ ಜಿಒವೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ರಾಜನ್ ಗೋಗೋಯಿ ಹಾಗೂ ಎನ್ .ವಿ.ರಾಮನ್ನ ಅವರನ್ನೊಳಗೊಂಡ ನ್ಯಾಯಪೀಠ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಲು ನಿರಾಕರಿಸಿದ್ದು, ರಾಜ್ಯ ಸಚಿವ ಸಂಪುಟ ವಿವಾದಕ್ಕೆ ಸಂಬಂಧಿಸಿದ ಪಾರಂಪರ್ಯ ಆಡಳಿತಗಾರರಾದ ಸಜ್ಜಾದ ನಶೀನ್ ಸೇರಿದಂತೆ ಎಲ್ಲಾ ಪಕ್ಷಗಳ ಅಭಿಪ್ರಾಯವನ್ನು ಆಲಿಸಿ, ಆಯೋಗಗಳ ವರದಿಯನ್ನು ಪರಿಶೀಲಿಸಿ, ಒಡೆತನದ ಹಕ್ಕನ್ನು ಬಗೆಹರಿಸಬೇಕು ಎಂದು ಹೇಳಿದೆ. ಒಂದು ವೇಳೆ, ರಾಜ್ಯ ಸರಕಾರದ ತೀರ್ಪು ಒಪ್ಪಿಗೆಯಾಗದಿದ್ದಲ್ಲಿ, ನ್ಯಾಯಾಲಯದ ಮೆಟ್ಟಿಲೇರಬಹುದು ಎಂದು ಅದು ಅರ್ಜಿದಾರರಿಗೆ ತಿಳಿಸಿದೆ.

ಆದಾಗ್ಯೂ, 5 ವರ್ಷಗಳ ಹಿಂದೆ ಸೈಯದ್ ಗೌಸ್ ಮುಹಿಯದ್ದೀನ್ ಶೇಖಾದ್ರಿ (ಓರ್ವ ಸಜ್ಜಾದ ನಶೀನ್-ಸೂಫಿ ಸಂತ ಪೀರ್ ವಂಶಸ್ಥ) ಹಾಗೂ ಸಿಟಿಜನ್ ಫಾರ್ ಜಸ್ಟಿಸ್ ಆ್ಯಂಡ್ ಪೀಸ್ ಸಲ್ಲಿಸಿದ್ದ ಅರ್ಜಿಯನ್ನೂ ಸಹ ಇದೇ ಸಂದರ್ಭದಲ್ಲಿ ವಿಚಾರಣೆ ನಡೆಸಿದ ನ್ಯಾಯಪೀಠ ದರ್ಗಾದಲ್ಲಿ ಸಾಂಪ್ರದಾಯಿಕ ಕರ್ಮಗಳನ್ನು ನೆರವೇರಿಸಲು ಸಜ್ಜಾದ ನಶೀನ್ ಅವರನ್ನು `ಮುಜಾವರ’ (ಗುರು) ಆಗಿ ನೇಮಿಸಲು ಅನುಮತಿ ನೀಡಿದೆ.

ದೀರ್ಘಕಾಲದ ಕಾನೂನು ಹೋರಾಟದ ಇತಿಹಾಸವನ್ನು ಹೊಂದಿರುವ ಬಾಬಾ ಬುಡನ್ ಗಿರಿ ದರ್ಗಾವನ್ನು 1978ರಲ್ಲಿ ವಕ್ಫ್ ಮಂಡಳಿ ತನ್ನ ವಶಕ್ಕೆ ಪಡೆದುಕೊಂಡಿತ್ತು. ಇದನ್ನು ಸಜ್ಜಾದ ನಶೀನ್ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿ, ತಮ್ಮ ಪರವಾಗಿ ತೀರ್ಪು ಪಡೆದಿದ್ದರು. ಆ ನಂತರವೂ ಸರಕಾರ ದರ್ಗಾ ವಶಕ್ಕೆ ಪ್ರಯತ್ನಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸಿ, ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ರಾಜ್ಯ ಸರಕಾರಕ್ಕೆ ಆದೇಶಿಸಿದೆ. ಅಲ್ಲದೆ, ದರ್ಗಾಕ್ಕೆ ಸಂಬಂಧಿಸಿದಂತೆ ಹಿಂದೂ ಬಲಪಂಥೀಯ ಸಂಘಟನೆಗಳು ಎತ್ತಿರುವ ವಿವಾದವನ್ನು ಬಗೆಹರಿಸಿ, ಸೂಕ್ತ ನಿರ್ಧಾರಕ್ಕೆ ಬರುವಂತೆ ನ್ಯಾಯಾಲಯ ರಾಜ್ಯ ಸರಕಾರವನ್ನು ಕೋರಿರುವುದು ಗಮನಾರ್ಹ.

http://www.newskannada.in/featured-story/bababudangiri-sc-asks-state-to-...