ಧಾರ್ಮಿಕ ಆಚರಣೆಗೆ ಭದ್ರತೆ ಒದಗಿಸುವಂತೆ ಇಮಾಮ್ಸ್ ಕೌನ್ಸಿಲ್ ಮನವಿ

Tue, 09/22/2015 - 12:54 -- web editor

ಮಂಗಳೂರು: ದೇಶಾದ್ಯಂತ ಸೆಪ್ಟಂಬರ್ 24ರಂದು ಮುಸ್ಲಿಮರು ಬಕ್ರೀದ್ ಹಬ್ಬವನ್ನು ಆಚರಿಸಲಿದ್ದು, ಕುರ್ಬಾನಿ ಆಚರಣೆಯೂ ಈ ಹಬ್ಬದ ಭಾಗವಾಗಿದೆ. ಮುಸ್ಲಿಮರ ಈ ಧಾರ್ಮಿಕ ಆಚರಣೆಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಸಮಾಜಘಾತುಕ ಶಕ್ತಿಗಳು ಮುಸ್ಲಿಮರ ಈ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸುವುದು, ಬೆದರಿಕೆಯೊಡ್ಡುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕರಾವಳಿಯಲ್ಲಿ ಇದು ವ್ಯಾಪಕವಾಗಿದೆ. ಕುರ್ಬಾನಿ ಎಂಬುದು ಮುಸ್ಲಿಮರಿಗೆ ಸಂವಿಧಾನ ನೀಡಿದ ಧಾರ್ಮಿಕ ಹಕ್ಕಾಗಿದೆ. ಕೆಲವು ಸಮಾಜದ್ರೋಹಿ ಶಕ್ತಿಗಳು ಈ ಹಕ್ಕಿಗೆ ಚ್ಯುತಿ ಉಂಟು ಮಾಡಲು ಪ್ರಯತ್ನಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದುದರಿಂದ ಜಿಲ್ಲಾಡಳಿತವು ಈ ಧಾರ್ಮಿಕ ಆಚರಣೆಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು ಹಾಗೂ ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡಲು ಪ್ರಯತ್ನಿಸುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ.ಜಿಲ್ಲಾಧ್ಯಕ್ಷ ಜಾಫರ್ ಸಾದಿಕ್ ಫೈಝಿ ದ.ಕ.ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ.