ದಾದ್ರಿಯಲ್ಲೆ ನಡೆಯಿತು ಇನ್ನೊಂದು ಗಲಭೆಗೆ ಸಂಚು!

Wed, 10/07/2015 - 14:54 -- web editor

ದಾದ್ರಿ (ಉತ್ತರ ಪ್ರದೇಶ): ಮನೆಯಲ್ಲಿ ದನದ ಮಾಂಸ ಇಟ್ಟುಕೊಂಡಿದ್ದಾರೆಂದು ಮೊಹಮ್ಮದ್ ಅಖ್ಲಾಖ್ ಕಗ್ಗೊಲೆ ನಡೆದ ವಾರದ ಒಳಗೆ ಪಕ್ಕದ ಹಳ್ಳಿಯಲ್ಲೇ ಇಂತಹ ಇನ್ನೊಂದು ಸಂಚು ರೂಪಿಸಿದ್ದನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ಬಿಸಾರಾಕ್ಕೆ 15 ಕಿಲೊಮೀಟರ್ ದೂರದಲ್ಲಿರುವ ಬದ್ಲಾಪುರ್ ಎಂಬಲ್ಲಿ ಯುವಕನೋರ್ವ ಸತ್ತ ದನವನ್ನು ತನ ಸ್ಮಾರ್ಟ್‌ಫೋನ್‌ನಲ್ಲಿ ಚಿತ್ರೀಕರಿಸಿ ಅದನ್ನು ವ್ಯಾಪಕವಾಗಿ ಪ್ರಸಾರ ಮಾಡಿದ್ದ. ತಾನು ಗೋಹತ್ಯಾ ಪ್ರಕರಣವನ್ನು ಸಹ ಭೇದಿಸಿದ್ದೇನೆ ಎಂದು ಕೆಲ ಹೊತ್ತಿನ ಬಳಿಕ ಆತ ಪೊಲೀಸರಿಗೆ ಕರೆಯೂ ಮಾಡಿದ್ದ. ಅಷ್ಟರಲ್ಲೇ ಜನ ಆ ದನದ ಕಳೇಬರದ ಸುತ್ತಲೂ ನೆರೆದು ಘೋಷಣೆಗಳನ್ನು ಕೂಗಲು ಆರಂಭಿಸಿಬಿಟ್ಟಿದ್ದರು. ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಕಾಯಿಲೆಯಿಂದ ಸತ್ತ ದನದ ಕಳೇಬರವೆಂದು ಪೊಲೀಸರಿಗೆ ಮನವರಿಕೆಯಾಯಿತು. ಗೋಹತ್ಯೆಯ ವದಂತಿಗಳನ್ನು ದನದ ಮಾಲಿಕರಾಗಿದ್ದ ಓರ್ವ ಹಿಂದೂ ಗೃಹಸ್ಥರು ನಿರಾಕರಿಸಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ತಾನು ಸಾಕಿದ ದನ ರೋಗದಿಂದ ಬಳಲಿ ಮೃತಪಟ್ಟಿದ್ದು ಆ ದನದ ಚಿತ್ರೀಕರಣ ಮಾಡಿ ಅದನ್ನು ಗೋಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗೋಹತ್ಯೆಯ ಸುಳ್ಳೂ ಸುದ್ದಿಯನ್ನು ಹಬ್ಬಿ ಕೋಮುಗಲಭೆ ನಡೆಸಲು ಹುನ್ನಾರ ನಡೆಸಿದ ಆರೋಪದ ಮೇಲೆ ದೀಪಕ್ ಶರ್ಮಾ (26) ಎಂಬಾತನನ್ನು ಬಂಧಿಸಲಾಗಿದೆ. ಈತ ಸ್ಥಳೀಯ ಗೋರಕ್ಷಣಾ ಪಡೆಯ ಪ್ರಮುಖ ಕಾರ್ಯಕರ್ತನಾಗಿದ್ದಾನೆ.

ದಾದ್ರಿಯಲ್ಲೇ ಇದೆ ಆರು ಗೋರಕ್ಷಣಾ ಪಡೆಗಳು!
ಮೊಹಮ್ಮದ್ ಅಖ್ಲಾಖ್ ಹತ್ಯೆ ನಡೆದ ಬಿಸಾರಾ ದಾದ್ರಿ ನಗರಕ್ಕೆ ಸಮೀಪವಿದ್ದು ಈ ದಾದ್ರಿ ನಗರದಲ್ಲೇ ಕನಿಷ್ಟ 6 ಗೋರಕ್ಷಣಾ ಸಂಘಟನೆಗಳು ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದು ಅವುಗಳ ಮೇಲೆ ನಿಗಾ ಇಟ್ಟಿದ್ದಾರೆ. ಇವುಗಳಲ್ಲಿ ಬಿಜೆಪಿ ಸಂಸದ ಯೋಗಿ ಆದಿತ್ಯನಾಥರ ಹಿಂದೂ ಯುವವಾಹಿನಿ ಸೇರಿದಂತೆ ಗೋ ರಕ್ಷಾ ಹಿಂದೂ ದಳ, ಬಜರಂಗದಳ, ಆರ್ಯ ವೀರ ದಳ, ಹಿಂದೂ ಮಹಾಸಭಾ ಮತ್ತು ಹಿಂದೂ ರಕ್ಷಾ ದಳ ಸೇರಿದೆ. ಈ ಎಲ್ಲ ಗುಂಪುಗಳಿಗೂ ಹೇರಳವಾಗಿ ಆರ್ಥಿಕ ನೆರವು ದೊರಕುತ್ತಿದ್ದು ಹೆಚ್ಚಿನ ಕಾರ್ಯಕರ್ತರು 18-25ರ ಪ್ರಾಯದ ಸ್ಥಳೀಯ ಯುವಕರೇ ಆಗಿದ್ದಾರೆ.

ಪೊಲೀಸರಂತೆ ಕಾರ್ಯಾಚರಣೆ
ಗೋಹತ್ಯೆ ನಡೆದರೆ ಅಥವಾ ದನದ ಮಾಂಸ ಪತ್ತೆಯದರೆ ಆಯಾ ಸ್ಥಳಗಳಲ್ಲಿರುವ 'ಗುಪ್ತಚರರು' ಅಥವಾ 'ಬಾತ್ಮೀದಾರರು' ಕೂಡಲೇ ಸಂಘಟನೆಯ ಮುಖಂಡರಿಗೆ ಸುದ್ದಿ ರವಾನಿಸುತ್ತಾರೆ. ಹತ್ತೇ ನಿಮಿಷಗಳಲ್ಲಿ ಗೋರಕ್ಷಕ ಪಡೆಯ ಸದಸ್ಯರು ಸ್ಥಳಕ್ಕೆ ದೌಡಾಯಿಸಿ ಮುಖ್ಯಸ್ಥರ ಆದೇಶದಂತೆ ಕಾರ್ಯಾಚರಣೆ ನಡೆಸುತ್ತೇವೆ ಎಂದು ಗೋರಕ್ಷಣಾ ಪಡೆಯ ಕಾರ್ಯಕರ್ತರು ಹೇಳಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಎರಡು ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರಿದ್ದು ಸರದಿಯಲ್ಲಿ ಸಂಘಟನೆಗಾಗಿ ಸಮಯ ನೀಡುತ್ತಾರೆ, ಪ್ರತಿ ತಿಂಗಳೂ ಕನಿಷ್ಟ ಮೂರು ಸಭೆಗಳನ್ನು ನಡೆಸುತ್ತಾರೆ ಎಂದೂ ಸಕ್ರಿಯ ಕಾರ್ಯಕರ್ತರು ಹೇಳುತ್ತಾರೆ.

http://karavalikarnataka.com/news/fullstory.aspx?story_id=4583&languagei...