ಖಾಶಿಂಜಿ ಹತ್ಯೆ ಪ್ರಕರಣ-ಮೂವರಿಗೆ ಜೀವಾವಧಿ, ಇಬ್ಬರಿಗೆ ಏಳು ವರ್ಷ ಕಠಿಣ ಸಜೆಯ ತೀರ್ಪು

Sat, 11/28/2015 - 10:12 -- web editor
ನ್ಯಾಯವಾದಿ ನೌಶಾದ್ ಖಾಶಿಂಜಿ

ಮಂಗಳೂರು: ನ್ಯಾಯವಾದಿ ನೌಶಾದ್ ಖಾಶಿಂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಮೂರನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂವರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ಇಬ್ಬರು ಅಪರಾಧಿಗಳಿಗೆ ಏಳು ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಪ್ರಮುಖ ಅಪರಾಧಿ ಎಂದು ಗುರುತಿಸಲ್ಪಟ್ಟಿರುವ ದಿನೇಶ್ ಶೆಟ್ಟಿ (30), ಪ್ರತಾಪ್ ಶೆಟ್ಟಿ (32) ಹಾಗೂ ರಿತೇಶ್ ಯಾನೆ ರೀತು (26) ಅವರಿಗೆ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದೆಯಲ್ಲದೆ, ದಂಡ ತೆರಲು ತಪ್ಪಿದರೆ ಐದು ವರ್ಷ ಹೆಚ್ಚುವರಿ ಕಠಿಣ ಶಿಕ್ಷೆ ಅನುಭವಿಸಲು ತನ್ನ ಆದೇಶದಲ್ಲಿ ತಿಳಿಸಿದೆ. ಮತ್ತಿಬ್ಬರು ಅಪರಾಧಿಗಳಾದ ಸುಬ್ರಹ್ಮಣ್ಯ ಮತ್ತು ಗಣೇಶ್ ಎಂಬವರಿಗೆ ಸಾಕ್ಷನಾಶ ಹಾಗೂ ಪೊಲೀಸರಿಗೆ ಸರಿಯಾದ ಮಾಹಿತಿ ನೀಡದ ಅಪರಾಧದಲ್ಲಿ ಏಳು ವರ್ಷಗಳ ಕಠಿಣ ಸಜೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದೆ. ದಂಡ ತೆರಲು ತಪ್ಪಿದರೆ ಹೆಚ್ಚುವರಿ ಮೂರು ವರ್ಷ ಕಠಿಣ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಧೀಶೆ ಪುಷ್ಪಾಂಜಲಿ ದೇವಿ ತೀರ್ಪಿನಲ್ಲಿ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 302 ಮತ್ತು ಸೆಕ್ಷನ್ 120ಬಿ ಪ್ರಕಾರ ಮೊದಲ ಮೂವರು ಅಪರಾಧಿಗಳಿಗೆ ತಲಾ 20 ಸಾವಿರ ರೂ. ದಂಡ ಮತ್ತು ಕಠಿಣ ಜೀವಾವಧಿ ಶಿಕ್ಷೆ, ಸೆಕ್ಷನ್ 25 ಮತ್ತು ಸೆಕ್ಷನ್ 27 ಪ್ರಕಾರ ತಲಾ 10 ಸಾವಿರ ರೂ. ದಂಡ ಮತ್ತು ಏಳು ವರ್ಷಗಳ ಕಠಿಣ ಸಜೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ. ಮತ್ತಿಬ್ಬರು ಅಪರಾಧಿಗಳಿಗೆ ಸೆಕ್ಷನ್ 201 ಪ್ರಕಾರ ಏಳು ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಸೆಕ್ಷನ್202 ಪ್ರಕಾರ ಆರು ತಿಂಗಳು ಕಠಿಣ ಸಜೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ
ನಗರದ ಫಳ್ನೀರ್ ಬಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದ ವಕೀಲ ನೌಶಾದ್ ಖಾಶಿಂಜಿಯವರಿಗೆ 2009ರ ಎಪ್ರಿಲ್ 9ರಂದು ರಾತ್ರಿ ಸುಮಾರು 8:30ಕ್ಕೆ ಫೋನ್ ಕರೆಯೊಂದು ಬಂದಿತ್ತು. ಈ ಕರೆಯಂತೆ ನೌಶಾದ್ ಅಪಾರ್ಟ್ ಮೆಂಟ್ನಿಂದ ಕೆಳಗೆ ಬಂದಾಗ ಅಪರಾಧಿಗಳು ಅವರ ಮೇಲೆ ಗುಂಡು ಹಾರಿಸಿದ್ದರು. ಈ ಸಂದರ್ಭದಲ್ಲಿ ಕಾಲಿಗೆ ಗುಂಡು ತಗಲಿ ಗಂಭೀರ ಗಾಯಗೊಂಡಿದ್ದ ನೌಷಾದ್ ಕೆಲವು ಅಡಿಗಳಷ್ಟು ದೂರ ಕ್ರಮಿಸಿದ್ದರೂ ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.

ಅಪರಾಧಿಗಳು ನೌಶಾದ್ ಮೇಲೆ ಹಾರಿಸಿದ್ದ ಗುರಿ ತಪ್ಪಿದ ಬುಲೆಟ್ಗಳು ಹತ್ಯಾ ಸ್ಥಳದಲ್ಲಿ ಬಿದ್ದಿದ್ದರಿಂದ ಪೊಲೀಸರು ಅವನ್ನು ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪ್ರಯೋಗಾಲಯದ ವರದಿಯಂತೆ ಪೊಲೀಸರು ವಶಕ್ಕೆ ಪಡೆದ ರಿವಾಲ್ವರ್ನಿಂದಲೇ ನೌಶಾದ್ಗೆ ಗುಂಡು ತಗಲಿತ್ತು. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿತ್ತು.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳಲ್ಲಿ ವಾದಿಸಿ ಗಮನ ಸೆಳೆದಿದ್ದ ನೌಶಾದ್ ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಬಂಧಿಯಾಗಿದ್ದ ಛೋಟಾ ಶಕೀಲ್ ಬಂಟನೆಂದು ಗುರುತಿಸಿಕೊಂಡಿದ್ದ ರಶೀದ್ ಮಲಬಾರಿ ಪರವಾಗಿ ನ್ಯಾಯಾಲಯಲದಲ್ಲಿ ವಾದಿಸುತ್ತಿದ್ದರು. ಮಲಬಾರಿ ಪರವಾಗಿ ವಾದ ಮಂಡಿಸುತ್ತಿದ್ದ ವಿಚಾರದಲ್ಲಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಈ ವಿಚಾರದಲ್ಲಿ ನೌಶಾದ್ ಖಾಶಿಂಜಿ ಭೂಗತ ಲೋಕದಿಂದ ಜೀವಬೆದರಿಕೆಯನ್ನು ಎದುರಿಸುತ್ತಿದ್ದರು.

ನೌಶಾದ್ರ ಹತ್ಯೆ ಬಳಿಕ ಅವರ ಗುರು ಹಾಗೂ ಹಿರಿಯ ನ್ಯಾಯವಾದಿ ಪುರಷೋತ್ತಮ ಪೂಜಾರಿಯವರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ಹತ್ಯೆ ಪ್ರಕರಣದಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳಾದ ಅಂದಿನ ಡಿಸಿಐಬಿ ಇನ್ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿಯಾಗಿದ್ದ ಜಯಂತ್ ಶೆಟ್ಟಿ, ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ, ಶಿವಪ್ರಕಾಶ್ ಅವರು ಶಾಮೀಲಾಗಿದ್ದಾರೆಂದೂ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಇವರ ವಿರುದ್ಧ ದೂರು ದಾಖಲಿಸಬೇಕೆಂದು ಆಗ್ರಹಿಸಿದ್ದರಲ್ಲದೆ, ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡತ್ತು. ಅನಂತರ ಉಚ್ಚನ್ಯಾಯಾಲಯದಲ್ಲಿ ಪ್ರಕರಣ ಬಿದ್ದುಹೋಗಿತ್ತು.

ನ್ಯಾಯಕ್ಕೆ ಸಂದ ಜಯ: ಸಮೀರ್ ಖಾಶಿಂಜಿ
ವಕೀಲ ನೌಶಾದ್ ಖಾಶಿಂಜಿ ಅವರ ಪರವಾಗಿ ಇಂದು ಪ್ರಕಟಗೊಂಡಿರುವ ತೀರ್ಪು ಸ್ವಲ್ಪ ಮಟ್ಟಿಗೆ ತೃಪ್ತಿ ತಂದಿದೆ ಎಂದು ನೌಶಾದ್ರ ಸಹೋದರ ಹಾಗೂ ನ್ಯಾಯವಾದಿ ಸಮೀರ್ ಖಾಶಿಂಜಿ ತಿಳಿಸಿದ್ದಾರೆ.

ಕೋರ್ಟ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ನ್ಯಾಯಕ್ಕೆ ಸಂದ ಜಯವಾಗಿದೆ ಎಂದಿದ್ದಾರೆ. ಪ್ರಸ್ತುತ ತೀರ್ಪಿನಿಂದ ಸಮಾಜಕ್ಕೆ ಸ್ಪಷ್ಟ ಸಂದೇಶವೊಂದು ರವಾನೆಯಾಗಿದೆ ಎಂದರು.

ಹತ್ಯೆಯಾಗಿರುವ ನೌಶಾದ್ರ ಸಹೋದರಿಯ ವಿವಾಹವು 2009ರ ಎಪ್ರಿಲ್ 12ರಂದು ನಿಗದಿಯಾಗಿತ್ತು. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಪ್ರಿಲ್ 10ರಂದು ಭಟ್ಕಳಕ್ಕೆ ಬರುವುದಾಗಿ ನೌಶಾದ್ ತನ್ನಲ್ಲಿ ತಿಳಿಸಿದ್ದ. ಆದರೆ, ಎಪ್ರಿಲ್ 9ರಂದು ಆತನ ಹತ್ಯೆಯಾಗಿದೆ ಎಂದು ಸಮೀರ್ ವಿಷಾದದಿಂದ ನುಡಿದರು.

http://www.sahilonline.in/coastal-news/%E0%B2%AD%E0%B2%9F%E0%B3%8D%E0%B2...