ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ: ಕ್ಯಾಂಪಸ್ ಫ್ರಂಟ್ ಖಂಡನೆ

Tue, 02/09/2016 - 06:51 -- web editor

ಶಾಂತಿಯುತ ಪ್ರತಿಭಟನೆಯ ವೇಳೆ ಪೋಲಿಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನೆಯನ್ನು ದಮನಿಸುವ ಮೂಲಕ ಸಂವಿಧಾನಾತ್ಮಕ ಹಕ್ಕನ್ನು ಕಸಿಯಲು ಪ್ರಯತ್ನಿಸಿದ್ದಾರೆ. ಈ ಘಟನೆಗಳಿಗೆ ಕಾರಣಕರ್ತರಾದ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ ಅಶ್ವಾಸನೆ ಕೊಟ್ಟು ವಿದ್ಯಾರ್ಥಿಗಳ ಮನವೊಲಿಸುವುದನ್ನು ಬಿಟ್ಟು ವಿದ್ಯಾರ್ಥಿಗಳ ಮೇಲೆ ಏಕಾಏಕಿ ಲಾಠಿ ಪ್ರಹಾರ ಮಾಡಿದ್ದು ಖಂಡನೀಯ. ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಈ ರೀತಿ ಪ್ರತಿಭಟನಾಕಾರರಿಗೆ ರಕ್ಷಣೆಕೊಡಬೇಕಿದ್ದ ಪೊಲೀಸರು, ಭಕ್ಷಕರಾಗಿ ಖಾಕಿ ದರ್ಪವನ್ನು ವಿದ್ಯಾರ್ಥಿಗಳ ಮೇಲೆ ಮೆರೆದಿರುವುದು ವಿಪರ್ಯಾಸ.

ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆದ ಈ ಎರಡು ಘಟನೆಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ನ್ಯಾಯಯುತ ಹೋರಾಟಕ್ಕೆ ಸವಾಲಾಗಿದೆ. ದೇಶದಲ್ಲಿ ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಿ ಅವರಲ್ಲಿ ಭಯದ ವಾತಾವರಣವನ್ನು ಸಷ್ಟಿಸಲು ಸರಕಾರ ಮತ್ತು ಫ್ಯಾಸಿಸ್ಟ್ ಶಕ್ತಿಗಳು ಪ್ರಯತ್ನಸುತ್ತಿವೆ. ಇದರ ವಿರುದ್ಧ ಹೋರಾಟ ನಡೆಸಲು ಜಾತ್ಯತೀತ ಶಕ್ತಿಗಳು ಒಂದಾಗಬೇಕಾಗಿದೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಬ್ದುಲ್ ರಹೀಂ ಬೆಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.