ಮಂಗಳೂರು ವಿವಿ ಎದುರು ಕ್ಯಾಂಪಸ್ ಫ್ರಂಟ್ ಧರಣಿ

Thu, 03/24/2016 - 09:13 -- web editor

ವಿದ್ಯಾರ್ಥಿಗಳ ಫಲಿತಾಂಶ ಲೋಪದೋಷ ಸರಿಪಡಿಸಲು ಆಗ್ರಹ

ಕೊಣಾಜೆ: ಮಂಗಳೂರು ವಿವಿಯ ಫಲಿತಾಂಶದ ಗೊಂದಲಗಳನ್ನು ಮತ್ತು ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಎದುರು ಮಾ.17ರಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ತಫ್ಸೀರ್, ಮಂಗಳೂರು ವಿವಿ ಮೌಲ್ಯಮಾಪನವನ್ನು ಖಾಸಗಿ ಕಂಪೆನಿಗಳಿಗೆ ನೀಡಿರುವುದು ತಪ್ಪು. ಖಾಸಗಿ ಕಂಪೆನಿಗಳ ಬೇಜವಾಬ್ದಾರಿಯಿಂದ ಜನವರಿಯಲ್ಲಿ ಬರಬೇಕಾದ ಫಲಿತಾಂಶ ಒಂದು ತಿಂಗಳು ತಡವಾಗಿ ಪ್ರಕಟವಾಗಿದೆ. ಇದರಿಂದಾಗಿ ಒಂದು ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾದವರು ಒಂದು ವರ್ಷವನ್ನೇ ಕಳೆಯುಂತಾಗಿದೆ. ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾದವರು ಮುಂದಿನ ತರಗತಿಗೆ ಹೋಗಲು ತಡೆಯುವ ಆದೇಶವನ್ನು ಸೆನೆಟ್ ಸಭೆಯಲ್ಲಿ ಮಾಡಿರುವುದು ಖಂಡನೀಯ. ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ಗೊಂದಲಗಳು ಇರುವುದು ಶಿಕ್ಷಣ ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಉದಾಹರಣೆಯಾಗಿದೆ ಎಂದರು.

ವಿವಿಯು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದಂತಹ ಫಲಿತಾಂಶ ಸಂಪೂರ್ಣ ಗೊಂದಲಮಯವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಭಯ ಮತ್ತು ಆಂತಕದ ವಾತಾವಾರಣ ಸಷ್ಟಿಸಿದೆ. ಪ್ರತೀ ಬಾರಿ ಉನ್ನತ ಶ್ರೇಣಿಗಳಲ್ಲಿ ತೇರ್ಗಡೆಗೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ ಏಕಾಏಕಿ ಕಡಿಮೆ ಅಂಕಗಳು ದೊರಕಿವೆ. ಅಲ್ಲದೇ ಆರು ವಿಷಯಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ ಹನ್ನೊಂದು ವಿಷಯಗಳ ಫಲಿತಾಂಶವನ್ನು ವಿವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೆಲ ವಿದ್ಯಾರ್ಥಿಗಳ ಫಲಿತಾಂಶ ಇಂದಿನ ವರೆಗೂ ಪ್ರಕಟವಾಗಿಲ್ಲ. ಇದಕ್ಕೆಲ್ಲಾ ವಿವಿ ನಿರ್ಲಕ್ಷವೇ ಕಾರಣವಾಗಿದೆ ಎಂದರಲ್ಲದೇ, ಫಲಿತಾಂಶದಲ್ಲಿ ಗೊಂದಲ ಉಂಟು ಮಾಡಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಅಧ್ಯಾಪಕರ ವಿರುದ್ಧ ಶೀಘ್ರ ಕೈಗೊಳ್ಳಬೇಕು ಎಂದು ತಫ್ಸೀರ್ ಆಗ್ರಹಿಸಿದರು.

ಆಡಳಿತ ಸೌಧದ ಎದುರು ಧರಣಿ ಕುಳಿತ ವಿದ್ಯಾರ್ಥಿಗಳು ವಿವಿ ಕುಲಪತಿಗಳು ಬಾರದೇ ಇದ್ದಲ್ಲಿ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಭೇಟಿ ನೀಡಿ ಮಾತನಾಡಿದ ಪ್ರೊ.ಟಿ.ಡಿ.ಕೆಂಪರಾಜು, ಖಾಸಗಿ ಸಂಸ್ಥೆಯವರು ಮೌಲ್ಯಮಾಪನ ನಡೆಸುವುದಿಲ್ಲ. ಅಧ್ಯಾಪಕರೇ ಮೌಲ್ಯಮಾಪನ ನಡೆಸುತ್ತಾರೆ. ಫಲಿತಾಂಶದ ನಮೂದನ್ನು ಖಾಸಗಿ ಸಂಸ್ಥೆಯವರು ಮಾಡಿದ್ದಾರೆ. ಅದರಲ್ಲಿ ಹಲವು ಗೊಂದಲಗಳು ಉಂಟಾಗಿವೆ. ಅಧ್ಯಾಪಕರಿಂದ ತಪ್ಪುಗಳಾಗಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಣ್ಣ ಗೊಂದಲಗಳು ಇದ್ದಲ್ಲಿ ಆಯಾಯ ಕಾಲೇಜುಗಳಲ್ಲೇ ಸರಿಪಡಿಸುವಂತೆ ಸೂಚನೆ ಹೊರಡಿಸಲಾಗಿದೆ ಎಂದರು.