ಬಾಬಾಬುಡನ್‌ಗಿರಿ ಕೇಸರೀಕರಣಗೊಳಿಸಲು ಯತ್ನ: ಕೋಸೌವೇ

kawebadmin's picture
Thu, 11/06/2014 - 05:54 -- kawebadmin

ಚಿಕ್ಕಮಗಳೂರು: ಬಾಬಾಬುಡನ್ ಗಿರಿಯನ್ನು ಕೇಸರೀಕರಣಗೊಳಿಸಲು ಸಂಘ ಪರಿವಾರ ಯತ್ನಿಸುತ್ತಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಘಟಕ ಮುಖಂಡರು ಆರೋಪಿಸಿದ್ದಾರೆ.

ದಾಖಲೆಗಳಲ್ಲಿ ಗುರುದತ್ತಾತ್ರೇಯಸ್ವಾಮಿ ದರ್ಗಾ ಎಂದಿರುವುದನ್ನು ದತ್ತ ಪೀಠ ಎಂದು ಬದಲಿಸಿ ನಾನಾ ಕಡೆಗಳಲ್ಲಿ ದಾಖಲಿಸುತ್ತಿರುವುದರನ್ನು ಖಂಡಿಸುವುದಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿದ್ದೀನ್ ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಘಟಕ ಅಧ್ಯಕ್ಷ ಫೈರೋಜ್ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಘ ಪರಿವಾರ ಮತ್ತು ಬಿಜೆಪಿ ಬಾಬಾಬುಡನ್ ಗಿರಿಯಲ್ಲಿ ಇಲ್ಲದ ಆಚರಣೆಗಳನ್ನು ಅನುಷ್ಠಾನಕ್ಕೆ ತಂದು ದೊಡ್ಡ ವಿವಾದವನ್ನು ಸೃಷ್ಟಿಸುವ ಮೂಲಕ ಸೌಹಾರ್ದತೆಗೆ ದಕ್ಕೆ ತಂದಿದ್ದಾರೆ. ದತ್ತ ಪೀಠ ಎಂದು ಅನೇಕ ಕಡೆಗಳಲ್ಲಿ ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಉಲ್ಲೇಖಿಸಿರುವುದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು.

ಬಿಎಸ್ಸೆನ್ನೆಲ್ ಮೊಬೈಲ್‌ಗಳಲ್ಲಿ ಬಿಬಿ ಹಿಲ್ಸ್ ಎಂದು ಬರುತ್ತಿತ್ತು. ಆದರೆ, ಇತ್ತೀಚೆಗೆ ದತ್ತ ಪೀಠ ಎಂದು ಬರುತ್ತಿದೆ. ಇವೆಲ್ಲವನ್ನು ಗಮನಿಸಿದಾಗ ಬಿಜೆಪಿ ಮತ್ತು ಸಂಘ ಪರಿವಾರ ವ್ಯವಸ್ಥಿತವಾಗಿ ಕೇಸರೀಕರಣಗೊಳಿಸಲು ಪ್ರಯತ್ನಿಸುತ್ತಿದೆ. ಈ ಎಲ್ಲ ಚಟುವಟಿಕೆಗಳನ್ನು ಒಂದು ತಿಂಗಳಲ್ಲಿ ಸರಿಪಡಿಸಿಕೊಳ್ಳದಿದ್ದರೆ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು. ಮುಖಂಡರಾದ ನವೀದ್ ಅಹಮದ್, ಅಜ್ಮತ್ ಪಾಷ, ಅಲ್ತಾಫ್, ಅಮ್ಜದ್‌ಖಾನ್ ಹಾಜರಿದ್ದರು.

ಬಜರಂಗ ದಳ ಪ್ರತಿಕ್ರಿಯೆ
ಜಿಲ್ಲೆಯಲ್ಲಿ ದತ್ತಪೀಠದ ವಿಚಾರವಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹೊಸ ಹೊಸ ವಿವಾದಗಳನ್ನು ಸೃಷ್ಟಿ ಮಾಡುವ ಮೂಲಕ ಸಾರ್ವಜನಿಕರ ನೆಮ್ಮದಿ ಕದಡುವ ಪ್ರಯತ್ನ ಮಾಡುತ್ತಿದೆ ಎಂದು ಬಜರಂಗದಳದ ತಾಲೂಕು ಸಂಚಾಲಕ ಕೋಟೆ ರಾಜು ಪ್ರತಿಕ್ರಿಯಿಸಿದ್ದಾರೆ.

ವೇದಿಕೆ ಮುಖಂಡರು ಅನಗತ್ಯವಾಗಿ ದತ್ತಪೀಠದ ಹೆಸರು ಕುರಿತು ಸಾರ್ವಜನಿಕರನ್ನು ದಾರಿತಪ್ಪಿಸುವಂತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನ್ಯಾಯಾಲಯದ ಆದೇಶವನ್ನು ತಮಗೆ ಮನಃ ಬಂದಂತೆ ಅರ್ಥೈಸಿಕೊಂಡು ಹೇಳಿಕೆ ನೀಡುತ್ತಿರುವುದನ್ನು ಖಂಡಿಸುವುದಾಗಿ ಹೇಳಿಕೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.

ಇನಾಂ ದತ್ತಾತ್ರೇಯ ಪೀಠದಲ್ಲಿರುವ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಿಸಿದ್ದು, ಅದರಿಂದ ಮೊಬೈಲ್‌ನಲ್ಲಿ ದತ್ತಪೀಠವೆಂದು ಬರುತ್ತಿದ್ದು, ಈ ಬಗ್ಗೆ ಕೋಮು ಸೌಹಾರ್ದ ವೇದಿಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿರುವ ಅವರು, ಮುಖಂಡರ ಹೇಳಿಕೆಗಳು ಮತ್ತು ವಿವಾದ ಸೃಷ್ಟಿಸಲು ನಡೆಸುತ್ತಿರುವ ಹುನ್ನಾರಗಳ ವಿರುದ್ಧ ಬಜರಂಗದಳ ಹೋರಾಟ ರೂಪಿಸುತ್ತದೆ ಎಂದು ಹೇಳಿದ್ದಾರೆ.

ಹೈದರಾಲಿ ಕಾಲದಲ್ಲಿ ಹಿಂದೂಗಳಿಗೆ ಮೋಸ ಮಾಡಿ ಇನಾಂ ದತ್ತಾತ್ರೇಯ ಪೀಠದ ಜಾಗವನ್ನು ಬಾಬಾಬುಡನ್‌ಗಿರಿ ಮಾಡುವ ಹುನ್ನಾರ ನಡೆಸಲಾಗಿತ್ತು. ಈ ಬಗ್ಗೆ ಇಲ್ಲಿಯ ತನಕ ಯಾವುದೇ ದಾಖಲೆಗಳಲ್ಲೂ ಉಲ್ಲೇಖವಾಗದೆ ಇದ್ದರು ಅನಗತ್ಯ ವಿವಾದ ಸೃಷ್ಟಿಸಿ ನೆಮ್ಮದಿ ಹಾಳು ಮಾಡುವ ಪ್ರಯತ್ನ ಈ ಸಂಘಟನೆಗಳು ಮಾಡುತ್ತಿವೆ. ಪೊಲೀಸ್ ಇಲಾಖೆ ಈ ಸಂಘಟನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.